ದಾವಣಗೆರೆ, ಏ. 13- ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಆರಂಭಿಕ ದಿನದಲ್ಲಿ ಜಿಲ್ಲೆಯಲ್ಲಿ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ.
ದಾವಣಗೆರೆ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ 2 ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆೆರೆ ದಕ್ಷಿಣ ಕ್ಷೇತ್ರದಿಂದ ಪಕ್ಷೇತರರಾಗಿ ಸುಭಾನ್ ಖಾನ್ ಹಾಗೂ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಭಾರತಿ ಕೆ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಪತ್ನಿ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ ಎಸ್ಸೆಸ್ಸೆಂ : ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಮೊದಲ ದಿನವೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದರು.
ಯಾವುದೇ ಪ್ರಚಾರ, ಅಬ್ಬರ, ಕಾರ್ಯಕರ್ತರ ಘೋಷಣೆಗಳು ಇಲ್ಲದೆ ತಮ್ಮ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಡಾ. ಹೆಚ್.ಬಿ. ಅರವಿಂದ್, ವಕೀಲ ಸೈಯದ್ ಸಲೀಂ, ಜಿ.ಹೆಚ್. ಗಣೇಶ್ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇಂದು ನಾಮಪತ್ರ ಸಲ್ಲಿಸಿದರೆ ಒಳಿತಾಗುತ್ತದೆ ಎಂದು ದೇವರ ಅಪ್ಪಣೆಯಾಗಿದ್ದರಿಂದ ಇಂದು ಸಲ್ಲಿಸಿ ದ್ದೇನೆ. ಬರುವ ಏ.17ರಂದು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸುತ್ತೇನೆ. ಅಂದು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳೂ, ತಂದೆಯವರೂ ಆದ ಶಿವಶಂಕರಪ್ಪ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಎಸ್ಸೆಸ್ಸೆಂ ಹೇಳಿದರು.
ಭಾರತಿ ನಾಮಪತ್ರ: ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಭಾರತಿ ಕೆ. ಗುರುವಾರ ನಾಮಪತ್ರ ಸಲ್ಲಿಸಿದರು. ಅಪರ್ಣಾ ಬಿ.ಆರ್., ಮಂಜುನಾಥ ಕೈದಾಳೆ, ಮಂಜುನಾಥ ಕುಕ್ಕವಾಡ, ಮಧು ತೊಗಲೇರಿ ಇದ್ದರು.