ದಾವಣಗೆರೆ, ಏ. 13- ಅಮುಲ್ ಹಾಲು ಉತ್ಪನ್ನ ಸಂಸ್ಥೆಯಲ್ಲಿ `ನಂದಿನಿ” ಸಂಸ್ಥೆಯನ್ನು ವಿಲೀನಗೊಳಿಸುವ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಾರ್ವಜನಿಕರಿಗೆ ನಂದಿನಿ ಹಾಲು ಮತ್ತು ಮಜ್ಜಿಗೆ ವಿತರಣೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ, ಮುಖ್ಯಮಂತ್ರಿಗಳಿಗೆ ಉಪ ವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕೆಎಂಎಫ್ ಉತ್ಪನ್ನಗಳನ್ನು ಖರೀದಿಸಿ ಕರ್ನಾಟಕದ ರೈತರ ಬದುಕನ್ನು ಹಸನುಗೊಳಿಸುವಂತೆ ಅವರು ಮನವಿ ಮಾಡಿದರು.
ರೈತರ ಬೆನ್ನೆಲುಬಾಗಿರುವ ಕೆಎಂಎಫ್ (ನಂದಿನಿ) ಸಂಸ್ಥೆಯನ್ನು ಮುಚ್ಚುವ ಹುನ್ನಾರ ನಡೆಸಿದ್ದು, ಗುಜರಾತ್ ನ ಅಮುಲ್ ಸಂಸ್ಥೆಯನ್ನು ಅಕ್ರಮವಾಗಿ ಕರ್ನಾಟಕದೊಳಗೆ ತರಲಾಗುತ್ತಿದೆ. ಅಮೂಲ್ ಮತ್ತು ನಂದಿನಿ ಸಂಸ್ಥೆಗಳನ್ನು ವಿಲೀನಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಡ್ಯದ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಅಮುಲ್ ಸಂಸ್ಥೆ ತನ್ನ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದಾಗಿ ಘೋಷಿಸಿದೆ. ಒಂದು ವೇಳೆ ಅಮುಲ್ ತೆಕ್ಕೆಗೆ ನಂದಿನಿ ಹೋದರೆ ರಾಜ್ಯದ ಲಕ್ಷಾಂತರ ರೈತರು ಬೀದಿಪಾ ಲಾಗುತ್ತಾರೆ ಎಂದು ಹೇಳಿದರು. ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕು ಗಳನ್ನು ವಿಲೀನಗೊಳಿಸಿದ್ದಾಯಿತು. ಇದೀಗ ನಂದಿನಿ ಹಾಲು ಉತ್ಪನ್ನ ಸಂಸ್ಥೆಯನ್ನು ವಿಲೀನಗೊಳಿಸಲು ಮುಂದಾಗಿರುವುದು ಖಂಡನೀಯ ಎಂದರು.
ಕರವೇ ನಾರಾಯಣಗೌಡರ ಬಣ ಈಗಾಗಲೇ ಅಮುಲ್ ವಿರುದ್ಧ ಚಳವಳಿ ಆರಂಭಿಸಿದೆ. ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಅಮುಲ್ ಹಾಲು , ಮೊಸರು ಮಾರಾಟಕ್ಕೆ ಮುಂದಾದರೆ ಅಂತಹ ಸಂಸ್ಥೆಗಳ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರವೇ ಪದಾಧಿಕಾರಿಗಳಾದ ಎನ್.ಟಿ.ಹನುಮಂತಪ್ಪ, ಜಿ.ಎಸ್. ಸಂತೋಷ್, ಡಿ. ಗಜೇಂದ್ರ, ಶಾಂತಮ್ಮ, ಮಂಜುಳಾ ಮಹಾಂತೇಶ್, ಜಬೀವುಲ್ಲಾ, ಆಟೋ ರಫೀಕ್, ಸುರೇಶ್, ರಾಘವೇಂದ್ರ, ಧೀರೇಂದ್ರ, ಚಂದ್ರಶೇಖರ್, ಪಿ. ರಾಘವೇಂದ್ರ, ಕರಬಸಪ್ಪ, ಅಯೂಬ್, ಮಂಜುನಾಥ್, ತುಳಸಿರಾಮ್, ಬಸರಾಜ್ ಮತ್ತಿತರರಿದ್ದರು.