ದೇಶದ ಸುಭದ್ರತೆಗಾಗಿ ಮತದಾನ ಮಾಡಿ : ಪ್ರಕಾಶ್‌ ಇಟ್ನಾಳ್‌

ದೇಶದ ಸುಭದ್ರತೆಗಾಗಿ ಮತದಾನ ಮಾಡಿ : ಪ್ರಕಾಶ್‌ ಇಟ್ನಾಳ್‌

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ

ದಾವಣಗೆರೆ, ಏ.13- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಮತದಾರರಿಗೆ ಇದೆ. ಆದ್ದರಿಂದ ಮತದಾನ ಅತ್ಯಂತ ಮಹತ್ವದ್ದಾಗಿದ್ದು, ದೇಶದ ಭವಿಷ್ಯ ಮತ್ತು ಸಮಗ್ರ ಬೆಳವಣಿಗೆಯಲ್ಲಿ ಮತದಾರರ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಇಟ್ನಾಳ್ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಯುವ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮದ ಪ್ರಯುಕ್ತ ನಿನ್ನೆ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಮತದಾರರೇ ಅರ್ಹ, ಸಮರ್ಥ ಮತ್ತು ಸುಭದ್ರ ಭಾರತ ನಿರ್ಮಾಣದ ಕ್ರಿಯಾಶೀಲ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿರ್ಣಾಯಕರು. ತಮ್ಮ ಮತವನ್ನು ಚಲಾಯಿಸಿ ಸಮರ್ಪಕ ಆಡಳಿತಕ್ಕೆ ಕಾರಣರಾಗಬೇಕು ಎಂದು ನುಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಮತದಾನದ ಬಗ್ಗೆ ಅರಿತುಕೊಳ್ಳಬೇಕು. ತಾವಷ್ಟೇ ಅಲ್ಲದೆ ತಮ್ಮ ಕುಟುಂಬದ ಎಲ್ಲ ಅರ್ಹ ಮತದಾರರಿಗೂ ಮತದಾನದ ಮಹತ್ವವನ್ನು ತಿಳಿಸಬೇಕು. ಸಾಮಾಜಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಪವಿತ್ರವಾದ ಮತದಾನವನ್ನು ಅರ್ಹ ವ್ಯಕ್ತಿಗಳಿಗೆ ಚಲಾಯಿಸುವ ಮೂಲಕ ವಿದ್ಯಾರ್ಥಿಗಳು ಸಂವಿಧಾನದತ್ತವಾದ ತಮ್ಮ ಹಕ್ಕನ್ನು ಅಧಿಕಾರಯುತವಾಗಿ, ನಿರ್ಭೀತಿ, ನಿರ್ಭಿಡೆಯಿಂದ ಚಲಾಯಿಸಬೇಕು. ತಮಗೆ ಬೇಕಾದ ಸರ್ಕಾರವನ್ನು
ತಾವೇ ಆಯ್ಕೆ ಮಾಡಿಕೊಂಡು, ದೇಶದ ಉನ್ನತಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಕುಟುಂಬಕ್ಕೆ ಮತದಾನ ಮಾಡಲು ಪ್ರೇರೇಪಿಸಬೇಕು. ಯಾವುದೇ ಆಮಿಷಗಳಿಗೆ ಗಮನ ನೀಡದೇ, ಮತಗಳನ್ನು ಹಣಕ್ಕೆ ಮಾರಿಕೊಳ್ಳದೇ ದೇಶದ ಉನ್ನತಿ ಗಮನದಲ್ಲಿ ಇಟ್ಟುಕೊಂಡು ಅರ್ಹರನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ತಿಳಿಸಿದರು.

ಕುಲಸಚಿವರಾದ ಬಿ.ಬಿ. ಸರೋಜ ಮಾತನಾಡಿ, ವಿದ್ಯಾರ್ಥಿಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ, ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಜವಾಬ್ದಾರಿ ಅರಿತು ಮತದಾನದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.

ನಂತರ ವಿದ್ಯಾರ್ಥಿಗಳು ಮತದಾನ ಜಾಗೃತಿಯ ಪ್ರಯುಕ್ತ ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿ ನಂತರ ಮೈದಾನದಲ್ಲಿ ಮೇ 10ರಂದು ಮತದಾನ ಮಾಡಿ ಎಂದು ಅಕ್ಷರ ರೂಪದಲ್ಲಿ ನಿಂತು ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ
ಡಾ.ಕೆ.ಶಿವಶಂಕರ್, ಪ್ರಾಧ್ಯಾಪಕರಾದ ಪ್ರೊ.ವೆಂಕಟರಾವ್ ಪಲಾಟಿ, ಡಾ. ವೆಂಕಟೇಶ, ಪ್ರೊ.ಶಿಶುಪಾಲ,
ಪ್ರೊ.ವಿರೂಪಾಕ್ಷಯ್ಯ, ಡಾ.ನಂದೀಶ್ವರಪ್ಪ, ಪ್ರೊ.ಪ್ರಸನ್ನ ಕುಮಾರ, ಪ್ರೊ.ಪ್ರಕಾಶ, ಪ್ರೊ.ಮಹಾಬಳೇಶ್ವರ,
ಪ್ರೊ.ರಾಮಲಿಂಗಪ್ಪ, ಡಾ.ಸೀಮಾ ಪಟೇಲ,
ಡಾ.ಶಿವಲಿಂಗಪ್ಪ, ಡಾ.ಚಂದ್ರಕಾಂತ ನಾಯ್ಕೋಡಿ,
ಡಾ.ಬಸವಣ್ಣ ಮತ್ತಿತರರಿದ್ದರು.

error: Content is protected !!