ದಾವಣಗೆರೆ: ಬೇಸಿಗೆಯ ಬಿಸಿಲಿಗೆ ಜನತೆ ಬಸವಳಿಯಲಾರಂಭಿಸಿದ್ದಾರೆ. ತುಸು ತಡವಾದರೂ, ಝಳ ಬೆವರಿಳಿಸುತ್ತಿದೆ. ಮಧ್ಯಾಹ್ನವಾಗುತ್ತಲೇ ಜನತೆ ಹೊರ ಬರಲು ಹಿಂಜರಿಯಲಾರಂಭಿಸಿದ್ದಾರೆ.
ಸೂರ್ಯ ಮೇಲೇರುತ್ತಿದ್ದಂತೆ ತಾಪ ಹೆಚ್ಚಾಗುತ್ತಿದೆ. ಜನರ ಮುಖದಲ್ಲಿ ಬೆವರು. ಮನೆ, ಕಚೇರಿಗಳಲ್ಲಿ ಫ್ಯಾನ್‌ಗಳ ತಿರುಗುವಿ ಕೆಯ ವೇಗ ಹೆಚ್ಚುತ್ತಿದೆ. `ಅಬ್ಬಾ ಏನ್ ಬಿಸಿಲಪ್ಪಾ?’ ಇದು ಸದ್ಯದ ಪರಿಸ್ಥಿತಿಯಲ್ಲಿ ಹೊರ ಬರುವ ಸಾಮಾನ್ಯ ಮಾತು.
ಹೌದು, ಹಮಾವಾನ ವೈಪರೀತ್ಯ ದಿಂದಾಗಿ ತಡವಾಗಿ ಸುರಿದ ಮಳೆಗಾಲ ಹಾಗೂ ಚಳಿಗಾಲ ಪರಿಣಾಮ ಮಾರ್ಚ್‌ನಲ್ಲಿ ಬಿಸಿಲಿನ ಧಗೆ ಅಷ್ಟಾಗಿ ಬಾಧಿಸಿರಲಿಲ್ಲ. ಏಪ್ರಿಲ್ ಆಗಮಿಸುತ್ತಲೇ ವರುಣನ ಪ್ರತಾಪ ಹಚ್ಚಾಗಿದ್ದು, ಜನತೆ ಅಕ್ಷರಷಃ ಬಿಸಿಲಿಗೆ ಬೆವರುತ್ತಿದ್ದಾರೆ ಬೆದರುತ್ತಿದ್ದಾರೆ ಕೂಡ.
ಬಿಸಿಲಿಗೆ ಛತ್ರಿ, ದುಪ್ಪಟ್ಟ, ಕ್ಯಾಪ್‌ಗಳ ಮೊರೆ ಹೋಗುತ್ತಿದ್ದಾರೆ ಜನ. ಹತ್ತುನಿಮಿಷ ಕರೆಂಟ್ ಕೈ ಕೊಟ್ಟರೂ ಕುಳಿತುಕೊಳ್ಳಲಾಗದು.
ರಾತ್ರಿ ವೇಳೆಯಂತೆ ಅರ್ಧಗಂಟೆ ಕರೆಂಟ್ ಹೋಯಿತಂದರೆ ನರಕ ದರ್ಶನ ಮಾಡಿದಂತಹ ಅನುಭವ. ಸೆಕೆ ತಾಳಲಾರದೆ ಮನೆ ಮಂದಿ ಎಲ್ಲಾ ಎದ್ದು ಗಾಳಿಗಾಗಿ ಹೊರ ಬಂದು ಕೂರುವ ಪರಿಸ್ಥಿತಿ. ಜೊತೆಗೆ ವಿದ್ಯುತ್ ಕಡಿತ ಮಾಡಿದ ಬೆಸ್ಕಾಂ ಇಲಾಖೆಗೆ ನೂರು ಜನ್ಮಕ್ಕೂ ತಾಳಲಾರದಷ್ಟು ಶಾಪಗಳ ಸುರಿಮಳೆ.
ಸದ್ಯ ತಂಪು ಪಾನೀಯಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಲ್ಲಂಗಡಿ, ಕರಬೂಜ ಹಣ್ಣುಗಳ ಕೊಳ್ಳುವಿಕೆ ಹೆಚ್ಚಾಗಿದೆ. ಕಬ್ಬಿನ ಹಾಲು, ಜ್ಯೂಸ್ ಅಂಗಡಿಗಳಿಗೆ ಜನ ಮುಗಿಬೀಳಲಾರಂಭಿಸಿದ್ದಾರೆ.
ಇಲ್ಲೇ ಇಷ್ಟು, ಇನ್ನು ಅಲ್ಲಿನ ಜನ ಹೋಗೋ? ಎಂದು ಬಳ್ಳಾರಿ, ಕಲಬುರ್ಗಿ, ಬೀದರ್ ಜನರ ಬಗ್ಗೆ ಅನುಕಂಪದ ಮಾತುಗಳೂ ಕೇಳಿ ಬರುತ್ತಿವೆ.
ಸದ್ಯ ದಾವಣಗೆರೆಯಲ್ಲಿ ತಾಪಮಾನ 39 ಡಿಗ್ರಿ ಗರಿಷ್ಟ ಮಟ್ಟ ದಾಖಲಾಗಿದೆ. ಬರುವ ಸೋಮವಾರ 40 ಡಿಗ್ರಿ ತಲುಪಲಿದೆ ಎಂದು ಹಮಾಮಾನ ವರದಿ ಹೇಳುತ್ತಿದೆ.