ಕೊಕ್ಕನೂರು : ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶದಲ್ಲಿ ಹನಗವಾಡಿ ವೀರೇಶ್
ಮಲೇಬೆನ್ನೂರು, ಏ.12- ದೇಶದಲ್ಲಿ 75 ವರ್ಷಗಳಲ್ಲಿ ಆಗದ ಕೆಲಸಗಳು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಾಗಿವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಹೇಳಿದರು.
ಕೊಕ್ಕನೂರು ಗ್ರಾಮದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಇದ್ದ ಎಸ್ಸಿ-ಎಸ್ಟಿ ಜನ ವಾಸಿಸುವ 10 ಸಾವಿರ ಹಳ್ಳಿಗಳಿಗೆ ಮೋದಿ ಅವರು ಪ್ರಧಾನಿ ಆದ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ.
ಎಸ್ಟಿ ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಲಾಗಿದೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯ ನೀಡುವ ಕೆಲಸ ಮಾಡುವುದನ್ನು ಬಿಟ್ಟು 10 ಕೆ.ಜಿ ಅಕ್ಕಿ ಕೊಡುತ್ತೇನೆಂದು ಮಾತ್ರ ಹೇಳುತ್ತಾರೆ.
ಜನಕ್ಕೆ ಅಕ್ಕಿಗಿಂತ ಅಗತ್ಯ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕಿದೆ ಎಂದು ವೀರೇಶ್ ಹೇಳಿದರು.
ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಶಕ್ತಿ ತುಂಬಲು ಕರ್ನಾಟಕದಲ್ಲಿ ಬಿಜೆಪಿ 120 ಸ್ಥಾನಗಳನ್ನು ಗೆಲ್ಲಿಸಲು ಸಂಕಲ್ಪ ಮಾಡಲಾಗಿದೆ. ಹರಿಹರ ಕ್ಷೇತ್ರದಲ್ಲಿ ನಾನೂ ಆಕಾಂಕ್ಷಿಯಾಗಿದ್ದೆ. ಆದರೆ, ಪಕ್ಷದ ವರಿಷ್ಠರು ಹರೀಶ್ ಅವರಿಗೆ ಟಿಕೆಟ್ ನೀಡಿದ್ದಾರೆ. ಅವರ ತೀರ್ಮಾನವನ್ನು ಗೌರವಿಸುವ ಮೂಲಕ ಹರೀಶ್ ಅವರ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆಂದು ವೀರೇಶ್ ಹೇಳಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ನಾವು ಮೊದಲೇ ಹೇಳಿದ್ದಂತೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿರುವ ಬಿ.ಪಿ.ಹರೀಶ್ ಅವರನ್ನು ಬಹುಮತದಿಂದ ಗೆಲ್ಲಿಸುತ್ತೇವೆ ಎಂದು ಪೂಜಾರ್ ಹೇಳಿದರು.
ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಪಿ.ಹರೀಶ್ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲರ ಹೋರಾಟಗಳಿಗೆ ಮನ್ನಣೆ ನೀಡಿ, ಅವರ ಬೇಡಿಕೆಗಳನ್ನು ಈಡೇರಿಸಿದ್ದು, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಬಿಜೆಪಿ ವರಿಷ್ಠರು ಈ ಬಾರಿಯೂ ನನಗೆ ಟಿಕೆಟ್ ಘೋಷಣೆ ಮಾಡಿರುವುದನ್ನು ಆಕಾಂಕ್ಷಿ ಗಳಾಗಿದ್ದ ಹನಗವಾಡಿ ವೀರೇಶ್ ಮತ್ತು ಚಂದ್ರಶೇಖರ್ ಪೂಜಾರ್ ಅವರು ಒಪ್ಪಿಕೊಂಡು ನನ್ನ ಗೆಲುವಿಗೆ ಶ್ರಮಿಸುವುದಾಗಿ ಹೇಳಿರುವುದು ನನಗೆ ಅಷ್ಟೇ ಅಲ್ಲದೇ, ಪಕ್ಷದ ಕಾರ್ಯಕರ್ತರಿಗೂ ಸಂತಸ ತಂದಿದೆ ಎಂದು ಹರೀಶ್ ಹೇಳಿದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಓಲೇಕಾರ್ ಅವರು ಸಮಾವೇಶವನ್ನು ಉದ್ಘಾಟಿಸಿದರು. ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಕೃಷ್ಣಕುಮಾರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಹರಿಹರ ಕ್ಷೇತ್ರದ ಪ್ರಭಾರಿ ಜೀವನಮೂರ್ತಿ, ಬಾತಿ ಚಂದ್ರಶೇಖರ್, ಕೆ.ಎನ್.ಹಳ್ಳಿ ಕುಬೇರಪ್ಪ, ಸಾಲಕಟ್ಟೆ ಸಿದ್ದಪ್ಪ, ಕೆ.ಬೇವಿನಹಳ್ಳಿ ಹಾಲೇಶ್, ಉಕ್ಕಡಗಾತ್ರಿ ಪ್ರಕಾಶ್, ನಂದಿಗುಡಿ ಶ್ರೀಕಾಂತ್, ಜಿಗಳಿ ಚಂದ್ರಪ್ಪ, ಹುಗ್ಗಿ ರಾಮಚಂದ್ರ, ಅಜಿತ್ ಸಾವಂತ್, ಐರಣಿ ಮಹೇಶ್ವರಪ್ಪ, ಆದಾಪುರ ವೀರೇಶ್, ಹುಗ್ಗಿ ಮಹಾಂತೇಶ್, ಐರಣಿ ಅಣ್ಣಪ್ಪ, ಕೂಸಗಟ್ಟಿ ಬಸವರಾಜ್, ಓ.ಬಿ.ನಿಂಗನಗೌಡ ಮತ್ತಿತರರು ವೇದಿಕೆಯಲ್ಲಿದ್ದರು.