ದಾವಣಗೆರೆ, ಏ. 12- ಟೆಲಿಕಾಲ್ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಚೇತನಾ ಹೋಟೆಲ್ ಬಳಿ ಎದುರಿಗಿದ್ದ ಟೆಲಿಕಾಲಿಂಗ್ ಕಚೇರಿ ಮುಂದೆ ಬುಧವಾರ ರಾತ್ರಿ ವಾಗ್ವಾದಕ್ಕಿಳಿದರು. ಪರಸ್ಪರ ವಾದ-ವಿವಾದಗಳ ನಂತರ ಬಡಾವಣೆ ಪೊಲೀಸರು ವಾತಾವರಣ ತಿಳಿಗೊಳಿಸಿದರು.
ಯಾವುದೇ ಪೂರ್ವಾನುಮತಿ ಪಡೆಯದೇ ಸುಮಾರು 59 ಕ್ಕೂ ಹೆಚ್ಚು ಲ್ಯಾಪ್‌ಟಾಪ್ ಬಳಸಿ ಆನ್‌ಲೈನ್ ಮೂಲಕ ಫಸಲ್ ಬಿಮಾ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ತಿಳಿಸುವ ನೆಪದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಮಾಹಿತಿ ತಿಳಿದ ಚುನಾವಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಟೆಲಿಕಾಲಿಂಗ್ ಗೆ ಬಳಸಲಾಗುತ್ತಿದ್ದ ಲ್ಯಾಪ್‌ಟಾಪ್ ಗಳನ್ನು ವಶಪಡಿಸಿಕೊಂಡು ಕಚೇರಿಯನ್ನು ಸೀಜ್ ಮಾಡಿದ್ದಾರೆ.
ಚೇತನಾ ಹೋಟೆಲ್ ಎದುರಿಗಿನ ಖಾಸಗಿ ಆಸ್ಪತ್ರೆಯ ಬಿಲ್ಡಿಂಗ್‌ನಲ್ಲಿದ್ದ ಕಚೇರಿಯಲ್ಲಿ ಸುಮಾರು 60 ಕ್ಕೂ ಹೆಚ್ಚು ಜನರನ್ನು ಈ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷಗಳ ಸಾಧನೆಯನ್ನು ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳುವುದು. ಬಿಜೆಪಿ ಕಮಲದ ಗುರುತಿಗೆ ಮತ ಚಲಾಯಿಸುವಂತೆ ಆಮಿಷ ಒಡ್ಡುವ ರೀತಿಯಲ್ಲಿ ಆನ್‌ಲೈನ್ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾ ಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಗುಜರಾತ್, ಬಿಹಾರ ಮೂಲದವರಿಗೆ ಕಾರ್ಯನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗಿದ್ದು, ಸ್ಥಳೀಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಮತ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರ ದಾಳಿ: ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಟೆಲಿಕಾಲಿಂಗ್ ಕಚೇರಿಗೆ ದಾಳಿ ನಡೆಸಿ, ಆನ್‌ಲೈನ್‌ನಲ್ಲಿ ಮತ ಕೇಳುವ ಮೂಲಕ ವಾಮಮಾರ್ಗ ಅನುಸರಿಸು ತ್ತಿದ್ದಾರೆಂದು ಆರೋಪಿಸಿದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಬಿಜೆಪಿ ಸ್ಪಷ್ಟನೆ: ಯಾವುದೇ ವಾಮಮಾರ್ಗದಲ್ಲಿ ಪ್ರಚಾರ ನಡೆಸುತ್ತಿಲ್ಲ. ಕಾಂಗ್ರೆಸ್‌ನವರು ಮಾಡುತ್ತಿರುವ ಆರೋಪ ಹಸಿ ಸುಳ್ಳು ಎಂದು ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಿದರು.
ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾತಾವರಣವನ್ನು ತಿಳಿಗೊಳಿಸಿದರು.