ಜಾಗೃತಿಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಸಲಹೆ
ದಾವಣಗೆರೆ, ಏ. 12 – ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯು ಮೇ 10 ರಂದು ನಡೆಯಲಿದ್ದು, ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದರು.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಇಂದು ಜರುಗಿದ ಮತಗಟ್ಟೆ ಪಿ.ಆರ್.ಒ ಹಾಗೂ ಎ.ಪಿ.ಆರ್.ಒ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂಬಂಧ ಈಗಾಗಲೇ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಅಧಿಕಾರಿ ಗಳನ್ನು ನೇಮಕ ಮಾಡಲಾಗಿದ್ದು, ತರಬೇತಿ ನಂತರ ಯಾವುದೇ ಲೋಪದೋಷಗಳಿಲ್ಲದಂತೆ, ಅಹಿತಕರ ಘಟನೆಗೆ ಆಸ್ಪದ ಮಾಡಿಕೊಡದಂತೆ ನಿಷ್ಪಕ್ಷಪಾತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಆದ್ಯತೆ ನೀಡಬೇಕು ಎಂದರು.
ಸೆಕ್ಟರ್ ಅಧಿಕಾರಿ ಕರಿಬಸಪ್ಪ ಮಾತನಾಡಿ, ಮತಗಟ್ಟೆ ಅಧಿಕಾರಿಗಳಿಗೆ ಮಸ್ಟರಿಂಗ್, ಮತದಾನ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು. ಈಗಾಗಲೇ ಮತದಾನ ದಿನಾಂಕವನ್ನು ಚುನಾವಣಾ ಆಯೋಗ ನಿಗದಿಪಡಿಸಿದ್ದು, ಮತಗಟ್ಟೆ ಕೇಂದ್ರಗಳಲ್ಲಿ ಅಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರಿಸಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಉಪ ವಿಭಾಗಾಧಿಕಾರಿ ಶ್ರೀಮತಿ ಎನ್.ದುರ್ಗಶ್ರೀ, ತಹಶೀಲ್ದಾರ್ ಡಾ. ಅಶ್ವತ್ಥ್, ಡಿ.ಡಿ.ಪಿ.ಐ ತಿಪ್ಪೇಶಪ್ಪ ಮತ್ತು ಇತರರು ಉಪಸ್ಥಿತರಿದ್ದರು.