ಮಲೇಬೆನ್ನೂರಿನ ನೀರಾವರಿ ಕಛೇರಿಗೆ ಮುತ್ತಿಗೆ
ಮಲೇಬೆನ್ನೂರು, ಏ. 10- ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಹಳ್ಳಿಗಳಿಗೆ ಭದ್ರಾ ಕಾಲುವೆ ನೀರು ತಲುಪದ ಕಾರಣ ರೊಚ್ಚಿಗೆದ್ದ ರೈತರು ಸೋಮವಾರ ಮಲೇಬೆನ್ನೂರಿನ ನೀರಾವರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಭದ್ರಾ ನಾಲಾ ನಂ. 3 ವಿಭಾಗ ವ್ಯಾಪ್ತಿಯ 8,9,10 ಮತ್ತು 14ನೇ ಉಪ ಕಾಲುವೆಗಳಿಗೆ ಒಳಪಡುವ ವಾಸನ, ಪಾಳ್ಯ, ಎಳೆಹೊಳೆ, ಕೆ.ಎನ್. ಹಳ್ಳಿ, ಸಿರಿಗೆರೆ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ, ಭಾನುವಳ್ಳಿ, ನಂದಿತಾವರೆ, ವಿನಾಯಕನಗರ ಕ್ಯಾಂಪ್, ಜಿಗಳಿ ಮತ್ತು ಕುಣೆಬೆಳಕೆರೆ ಗ್ರಾಮಗಳ ನೂರಾರು ರೈತರು ನೀರಾವರಿ ಕಛೇರಿಗೆ ಬೀಗ ಜಡಿದು ಇಂಜಿನಿಯರ್ಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
10ನೇ ಉಪ ಕಾಲುವೆಯಲ್ಲಿ ನೀರಿನ ರೊಟೇಷನ್ ಪದ್ಧತಿ 3 ದಿನ ಮಾತ್ರ ಉಳಿದಿದ್ದು, ಅಷ್ಟರೊಳಗೆ ನಮಗೆ ನೀರು ಹರಿಸದಿದ್ದರೆ ರೊಟೇಷನ್ ಮುಂದುವರಿಸ ಬೇಕೆಂದು ಭಾನುವಳ್ಳಿ ರೈತರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಭದ್ರಾ ಅಚ್ಚುಕಟ್ಟು ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಅವರು, ಬಸವಾ ಪಟ್ಟಣದ ಬಳಿ ಆರ್2ನಲ್ಲಿ ನಮಗೆ ಬರಬೇಕಾದ ನೀರು ಬರುತ್ತಿದೆ.
ಅಲ್ಲಿಂದ ಈ ಕಡೆ ವಿಪರೀತ ಅಕ್ರಮ ಪಂಪ್ಸೆಟ್ಗಳು ನಾಲೆ ನೀರು ಎತ್ತುತ್ತಿರುವುದರಿಂದ ಕೊಮಾರನಹಳ್ಳಿ ಬಳಿ ಗೇಜ್ ಕಡಿಮೆ ಆಗುತ್ತಿದೆ ಹೀಗಾಗಿ ಕೊನೆ ಭಾಗಕ್ಕೆ ಬರಬೇಕಾದ ನೀರು ಬರುತ್ತಿಲ್ಲ. ಅಕ್ರಮ ಪಂಪ್ಸೆಟ್ಗಳಿಗೆ ಕಡಿವಾಣ ಹಾಕದ ಹೊರತು ಕೆಳಭಾಗದ ರೈತರ ಸಮಸ್ಯೆ ನೀಗದು ಎಂದು ಬೇಸರ ವ್ಯಕ್ತಪಡಿಸಿದರು.
ರೊಟೇಷನ್ ಸಮಯದೊಳಗೆ ಎಲ್ಲಾ ಉಪ ಕಾಲುವೆಗಳಿಗೆ ಸಮರ್ಪಕ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಇಂಜಿನಿ ಯರ್ಗಳಿಗೆ ದ್ಯಾವಪ್ಪ ರೆಡ್ಡಿ ಸೂಚಿಸಿದರು.
ಪಿಎಸ್ಐ ಯುವರಾಜ್ ಕಂಬಳಿ ಅವರು ರೈತರನ್ನು ಸಮಾಧಾನ ಪಡಿಸಿ, ಅಕ್ರಮ ಪಂಪ್ಸೆಟ್ಗಳ ತೆರವಿಗಾಗಿ ನಾವೂ ನಿಮ್ಮ ಜೊತೆ ಬರುತ್ತೇವೆ. ಅಕ್ರಮ ಪಂಪ್ಸೆಟ್ ಹಾಕಿಕೊಂಡಿರುವವರ ಮೇಲೆ ದೂರು ಕೊಟ್ಟರೆ ಎಫ್ಐಆರ್ ಹಾಕಿ ಕ್ರಮ ಕೈಗೊಳ್ಳುತ್ತೇವೆ ಎಂದು ಇಂಜಿನಿಯರ್ಗಳಿಗೆ ಹೇಳಿದರು.
ರೈತರಾದ ಸಿರಿಗೆರೆ ರುದ್ರಪ್ಪ, ಭಾನುವಳ್ಳಿಯ ಜೆ. ಗುತ್ಯಪ್ಪ, ಹಣಚಿಕ್ಕಿ ನಾರಾಯಣಪ್ಪ, ಕುಂಬಾರ್ ಬಸವರಾಜ್, ಕುಣೆಬೆಳಕೆರೆ ಎಸ್. ಅಂಜಿನಪ್ಪ, ಮಡಿವಾಳರ ಮಲ್ಲೇಶಪ್ಪ ಮತ್ತಿತರರು ಕೊನೆ ಭಾಗಕ್ಕೆ ಸಮ ರ್ಪಕವಾಗಿ ನೀರು ಬರಬೇಕಾದರೆ ನೀವು ಹಗಲು – ರಾತ್ರಿ ಆರ್2 ನಿಂದ ಕೊಮಾರನಹಳ್ಳಿ ಗೇಜ್ವರೆಗೆ ನಾಲೆ ಮೇಲೆ ಸಂಚರಿಸಬೇಕೆಂದು ಇಂಜಿನಿ ಯರ್ಗಳಿಗೆ ಒತ್ತಾಯಿಸಿದರು.
ಭದ್ರಾ ನಾಲಾ ನಂ. -3 ವಿಭಾಗ ದ ಕಾರ್ಯಪಾಲಕ ಅಭಿಯಂತರ ಜಿ.ಎಸ್. ಪಟೇಲ್ ಮಾತನಾಡಿ, ಮಂಗಳವಾರದಿಂದಲೇ ಅಕ್ರಮ ಸೆಟ್ಗಳ ತೆರವು ಕಾರ್ಯಾಚರಣೆ ಪ್ರಾರಂಭಿಸುತ್ತೇವೆ. ಅದಕ್ಕಾಗಿ ಬೆಸ್ಕಾಂ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಪೊಲೀಸರು ರಕ್ಷಣೆ ಒದಗಿಸುವ ಭರವಸೆ ನೀಡಿದ್ದಾರೆ.
ರೋಟೇಷನ್ ಸಮಯದೊಳಗೆ ಕೊನೆ ಭಾಗದ ರೈತರಿಗೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾತು ಕೊಟ್ಟ ನಂತರ ರೈತರು ಪ್ರತಿಭಟನೆ ಕೈ ಬಿಟ್ಟರು.
ಬಸವಾಪಟ್ಟಣ ಎಇಇ ಧನಂಜಯ ಅವರು ಕೊಮಾರನಹಳ್ಳಿ ಬಳಿ 5 ಅಡಿ ಗೇಜ್ ಕೊಡುವುದಾಗಿ ಹೇಳಿದರೆ ಮಲೇಬೆನ್ನೂರು ಎಇಇ ಚಂದ್ರಕಾಂತ್ ಅವರು ಕೆಳಭಾಗಕ್ಕೆ ಸಮರ್ಪಕವಾಗಿ ನೀರು ತಲುಪಿಸಲು ಓಡಾಡುತ್ತೇನೆಂದರು.
ಈ ವೇಳೆ ಕೆಲ ರೈತರು ನೀರು ತಲುಪದೇ ಬೆಳೆ ಹಾನಿಯಾದರೆ ಯಾರು ಜವಾಬ್ದಾರರೆಂದು? ಪ್ರಶ್ನಿಸಿದಾಗ ರೈತರ ನಡುವೆಯೇ ಗೊಂದಲ ಉಂಟಾಯಿತು.
ಚುನಾವಣೆಗಾಗಿ ವಶಕ್ಕೆ ಪಡೆದಿದ್ದ ನೀರಾವರಿ ಇಲಾಖೆಯ ಜೀಪನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಾಪಾಸ್ ನೀಡಿದ್ದಾರೆಂದು ದ್ಯಾವಪ್ಪ ರೆಡ್ಡಿ ತಿಳಿಸಿದರು.
ಮಳೆ ಬೀಳುವವರೆಗೆ ಸ್ವಲ್ಪ ಕಷ್ಟಪಟ್ಟು ಕೊನೆ ಭಾಗದ ಜಮೀನುಗಳಿಗೆ ನೀರು ತಲುಪಿಸುವ ಕೆಲಸ ಮಾಡಿ, ನಂತರ ನಾವೇ ನಿಮ್ಮನ್ನು ನಮ್ಮ ಊರುಗಳಿಗೆ ಕರೆದು ಸನ್ಮಾನ ಮಾಡುತ್ತೇವೆಂದು ರೈತರು ಇಂಜಿನಿಯರ್ಗಳನ್ನು ಹುರಿದುಂಬಿಸಿದರು.
ರೈತರಾದ ಜಿಗಳಿಯ ಬಿಳಸನೂರು ಚಂದ್ರಪ್ಪ, ಭಾನುವಳ್ಳಿಯ ದೊಡ್ಮನಿ ರಂಗನಾಥ್, ಶಿವಸ್ವಾಮಿ, ಬಾದಾಮಿ ಶಿವಯೋಗಿ, ಬಲ್ಲೂರು ಪರಮೇಶ್,ಬಿ. ಹನುಮಂತ, ಗಂಗಾಧರ್, ಕುಣೆಬೆಳಕೆರೆ ಕೆ. ಬಸವರಾಜ್, ಹುಲ್ಮನಿ ಚಿಕ್ಕಣ್ಣ, ತಿಪ್ಪಣ್ಣ, ಶಂಕ್ರಪ್ಪ, ಶರಣಯ್ಯ, ಹನುಮಂತಪ್ಪ ಸೇರಿದಂತೆ ಇನ್ನೂ ಅನೇಕ ರೈತರು ಈ ವೇಳೆ ಹಾಜರಿದ್ದರು. ಪೊಲೀಸರು ಭದ್ರತೆ ಒದಗಿಸಿದ್ದರು.
ಗೇಜ್ ಏರಿಕೆ : ರೈತರ ಪ್ರತಿಭಟನೆಯ ಪರಿಣಾಮವಾಗಿ ಕೊಮಾರನಹಳ್ಳಿ ಬಳಿ ಸೋಮವಾರ ಸಂಜೆ ನೀರಿನ ಮಟ್ಟ 4.5 ಅಡಿಗೆ ತಲುಪಿದೆ.