ಹರಿಹರ, ಏ.22- ಹರಿಹರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಕೊಮಾರನಹಳ್ಳಿಯ ಜಿ. ಮಂಜುನಾಥ್ ಪಟೇಲ್ ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಹರಿಹರ ಎಪಿಎಂಸಿಗೆ ಮೂರನೇ ಬಾರಿಗೆ ಅಧ್ಯಕ್ಷರಾಗಿರುವ ಮಂಜುನಾಥ್ ಪಟೇಲ್ ಅವರು ಕಳೆದ 15 ವರ್ಷಗಳಿಂದ ಸತತವಾಗಿ ಎಪಿಎಂಸಿ ಸದಸ್ಯರಾಗಿದ್ದು, ಈ ಹಿಂದಿನ ಅವಧಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಹನುಮಂತ ರೆಡ್ಡಿ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ – ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಂಜುನಾಥ್ ಪಟೇಲ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಭಾನುವಳ್ಳಿಯ ಆರ್. ಹೆಚ್. ಮಲ್ಲಿಕಾರ್ಜುನ್ ಸ್ಪರ್ಧಿಸಿದ್ದರು.
ಮಂಜುನಾಥ್ ಪಟೇಲ್ ಅವರು 10 ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿ ಮಲ್ಲಿಕಾರ್ಜುನ್ 6 ಮತಗಳನ್ನು ಪಡೆದು ಪರಾಭವಗೊಂಡರು.
ಒಟ್ಟು 16 ಸದಸ್ಯರ ಪೈಕಿ ನಾಮಿನಿ ಸದಸ್ಯರು ಸೇರಿ ಬಿಜೆಪಿ 6, ಕಾಂಗ್ರೆಸ್ 4 ಮತ್ತು ಜೆಡಿಎಸ್ 6 ಸದಸ್ಯರನ್ನು ಹೊಂದಿದೆ. ಇಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಬಿಜೆಪಿ – ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುತ್ತಿವೆ.
ಎಪಿಎಂಸಿ ಉಪಾಧ್ಯಕ್ಷ ಕೊಕ್ಕನೂರು ಬಸವರಾಜ್, ನಿರ್ದೇಶಕರಾದ ಅಮರಾವತಿ ಮಹಾದೇವಪ್ಪ ಗೌಡ್ರು, ಬೆಳ್ಳೂಡಿ ನರೇಂದ್ರ, ಮಲ್ಲನಾಯ್ಕನಹಳ್ಳಿಯ ಗೌಡ್ರ ಶೇಖರಪ್ಪ, ಹನುಮಂತ ರೆಡ್ಡಿ, ಶ್ರೀಮತಿ ಶಾಂತಮ್ಮ ಸುರೇಶ್, ಹೆಚ್.ಕೆ. ಶಿವಣ್ಣ, ಕೆ.ಎನ್. ಹಳ್ಳಿಯ ವಿ.ಕುಬೇರಪ್ಪ, ಜಿಗಳಿಯ ಈರಮ್ಮ ರುದ್ರಗೌಡ, ವಾಸನದ ತಂಬಳಿ ರುದ್ರಪ್ಪ ಸೇರಿದಂತೆ ಎಲ್ಲಾ ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿ ಮತ ಹಾಕಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ಚುನಾವಣಾಧಿಕಾರಿಯಾಗಿದ್ದರು. ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ವಿದ್ಯಾಶ್ರೀ ಸಹಕರಿಸಿದರು.
ಚುನಾವಣೆ ನಂತರ ನೂತನ ಅಧ್ಯಕ್ಷರನ್ನು ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶಸ್ವಾಮಿ ಸೇರಿದಂತೆ ಇನ್ನೂ ಅನೇಕರು ಅಭಿನಂದಿಸಿದರು.