1938-2011
ಹೆಚ್.ಎನ್. ಷಡಾಕ್ಷರಪ್ಪ ಅವರು ಕರ್ನಾಟಕದ ಕೇಂದ್ರ ಬಿಂದುವಾಗಿರುವ ದಾವಣಗೆರೆ ನಗರದಿಂದ ಕಳೆದ 47 ವರ್ಷಗಳಿಂದ ಪ್ರಕಟವಾಗುತ್ತಿರುವ ಜನತಾವಾಣಿ’ ಕನ್ನಡ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರು.
1938ರ ಮೇ ಒಂದರಂದು ದಾವಣಗೆರೆ ತಾಲ್ಲೂಕಿನ ಮೆಳ್ಳೇಕಟ್ಟೆ ಗ್ರಾಮದಲ್ಲಿ ಜನಿಸಿದ ಹೆಚ್ಚೆನ್ನೆಸ್ ಅವರು ಬಾಲ್ಯದಿಂದಲೇ ಪತ್ರಿಕೋದ್ಯಮದ ಕಡೆ ಸೆಳೆತ ಹೊಂದಿದ್ದರು.
ಪ್ರೌಢಶಾಲಾ ವಿದ್ಯಾರ್ಥಿ ದಿಸೆಯಲ್ಲಿ ‘ಹಳ್ಳಿಯ ಜ್ಯೋತಿ’ ಕೈ ಬರಹದ ಪತ್ರಿಕೆ ಹಾಗೂ ಕಾಲೇಜು ವಿದ್ಯಾರ್ಥಿ ದಿಸೆಯಲ್ಲಿ ‘ಜನತಾ ಬಂಧು’ ಮಾಸ ಪತ್ರಿಕೆ ಪ್ರಕಟಣೆ ಮಾಡಿದ್ದರು.
ನಂತರ ಹುಬ್ಬಳ್ಳಿಯಲ್ಲಿ ದಿ. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ಹಾಗೂ ‘ವಿಶ್ವವಾಣಿ’ ಸಂಪಾದಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತುಮಕೂರಿನ ಬೃಂದಾವನ ವಾರಪತ್ರಿಕೆಯ ಗೌರವ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
1974ರಲ್ಲಿ ದಾವಣಗೆರೆಯಲ್ಲಿ ಅವರು ಜನತಾವಾಣಿ’ ದಿನಪತ್ರಿಕೆ ಪ್ರಾರಂಭಿಸಿದರು. ಹೆಚ್ಚೆನ್ನೆಸ್ ಎಂದೇ ಹೆಸರಾಗಿದ್ದ ಷಡಾಕ್ಷರಪ್ಪ ಅವರು, ಗಾಂಧೀಜಿ, ಲೋಹಿಯಾ, ಜೆ.ಪಿ., ಅಂಬೇಡ್ಕರ್ ಹಾಗೂ ಬುದ್ಧ – ಬಸವರ ವಿಚಾರಧಾರೆಯ ಚಿಂತನೆಯಲ್ಲಿ ಬೆಳೆದವರು.
1988ರಲ್ಲಿ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. 2004ರಲ್ಲಿ ಅವರು ರಾಜ್ಯೋತ್ಸವ ಪ್ರಶಸ್ತಿ ಹಾಗೂ 2005ರಲ್ಲಿ ಟಿಎಸ್ಸಾರ್ ಪ್ರಶಸ್ತಿಯ ಗೌರವ ಪಡೆದುಕೊಂಡಿದ್ದರು.
ಹಲವಾರು ಸಂಘ – ಸಂಸ್ಥೆಗಳಲ್ಲೂ ಹೆಚ್ಚೆನ್ನೆಸ್ ಸಕ್ರಿಯರಾಗಿ ತೊಡಗಿ ಸಮಾಜಮುಖಿಯಾಗಿದ್ದರು.
ರಾಜ್ಯ ಸಣ್ಣ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.
ಕುದುರೆಮುಖ ಆಂದೋಲನದ ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ, ಮಧ್ಯ ಕರ್ನಾಟಕದ ಬೆದ್ದಲು ಭೂಮಿ ನೀರಾವರಿ ಹೋರಾಟದಲ್ಲಿ ಸಕ್ರಿಯ ಮುಂದಾಳತ್ವ ವಹಿಸಿದ್ದರು. ಐತಿಹಾಸಿಕ ಗೋಕಾಕ್ ಚಳುವಳಿಯಲ್ಲಿ ಪತ್ರಿಕೆಯೊಡನೆ ಸಕ್ರಿಯ ಪಾತ್ರ ವಹಿಸಿದ್ದರು.
ಲಾತೂರ್ ಭೂಕಂಪ ಹಾಗೂ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪತ್ರಿಕೆಯ ಓದುಗರಿಂದ 15 ಲಕ್ಷ ರೂ. ಹಣ ಕೊಡಿಸಿಕೊಟ್ಟ ಸಂವೇದನಾಶೀಲರೂ ಆಗಿದ್ದರು.
ಟಿಎಸ್ಸಾರ್ ಪ್ರಶಸ್ತಿಯಿಂದ ಬಂದ 1 ಲಕ್ಷ ರೂ.ಗಳನ್ನು ‘ಜನತಾವಾಣಿ’ ಹೆಸರಿನಲ್ಲಿ ‘ಓದುಗ ಪ್ರಶಸ್ತಿ’ ನೀಡಲು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಕೊಡುಗೆಯಾಗಿ ಕೊಟ್ಟಿದ್ದರು.