ಮಾನ್ಯರೇ,
ಮಹಾತ್ಮ ಗಾಂಧಿ ವೃತ್ತ ಮತ್ತು ಮಂಡಿಪೇಟೆಯು ನಗರದ ಹೃದಯ ಭಾಗದಂತಿವೆ. ಮಹಾತ್ಮ ಗಾಂಧಿ ವೃತ್ತ ಪ್ರಮುಖ ವೃತ್ತ. ಮಂಡಿಪೇಟೆಯು ನಗರಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಬಹುದೊಡ್ಡ ವಾಣಿಜ್ಯ ಕೇಂದ್ರ. ಹಾಗಾಗಿ ಪ್ರತಿಯೊಬ್ಬ ನಾಗರಿಕನು ತನ್ನ ವ್ಯಾಪಾರ-ವ್ಯವಹಾರಗಳಿಗೆ ಈ ಎರಡೂ ಭಾಗಗಳಲ್ಲಿ ಸಂಚರಿಸಲೇಬೇಕು. ಈ ಸ್ಥಳಗಳನ್ನು ಸಂಧಿಸಲು ಅಶೋಕ ರಸ್ತೆಯ ಮೂಲಕವೇ ಹಾದು ಹೋಗಬೇಕು. ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯ ವಾಹನಗಳು ನಿತ್ಯವೂ ಸಂಚರಿಸುತ್ತವೆ. ಆದರೆ ಮಹಾತ್ಮ ಗಾಂಧಿ ವೃತ್ತದಿಂದ ಮಂಡಿಪೇಟೆಯನ್ನು ಸಂಪರ್ಕಿಸುವ ರೈಲ್ವೆ ಹಳಿಗಳವರೆಗಿನ ಅಶೋಕ ರಸ್ತೆ ಕೇವಲ ಮುನ್ನೂರು ಮೀಟರ್ ಗಳಷ್ಟು ಅಂತರವಿದೆ. ಆದರೆ ಈ ಅಂತರದಲ್ಲಿ ಮೂವತ್ತಕ್ಕೂ ಹೆಚ್ಚು ಗುಂಡಿಗಳಿವೆ. ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡುವುದು ಚಾಲಕರಿಗೆ ಸಾಧ್ಯವೇ ಇಲ್ಲ. ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಾಡಬೇಕು. ಹಲವು ವರ್ಷಗಳಿಂದ ಈ ಗುಂಡಿಗಳು ಹಾಗೆಯೇ ಇವೆ.
ಈಗಂತು ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಮಳೆಯ ನೀರು ಗುಂಡಿಗಳಲ್ಲಿ ತುಂಬಿರುವುದರಿಂದ ಸಂಚಾರ ಮಾಡುವುದಂತು ಪ್ರಾಯಸಕರವಾದುದು. ಕೆಲವು ಗುಂಡಿಗಳು ಬಹಳ ಆಳವಿದ್ದು ದ್ವಿಚಕ್ರ ವಾಹನಗಳಲ್ಲಿ ಓಡಾಡುವುದಂತು ತುಂಬಾ ಸವಾಲಿನದು. ಸ್ಮಾರ್ಟ್ ಸಿಟಿ ಭಾಗ್ಯ ಪಡೆದಿರುವ ದಾವಣಗೆರೆ ನಗರದ ಈ ಹೃದಯ ಭಾಗವೇ ಹೀಗಿದೆ. ಆದುದರಿಂದ ಇಲ್ಲಿ ಸಂಚಾರ ಮಾಡುವ ನಾಗರಿಕರು ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರುವ ಮುನ್ನ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಸಂಬಂಧಪಟ್ಟವರು ಕೂಡಲೆ ಇತ್ತಕಡೆ ಗಮನ ನೀಡಿ ಅನಾಹುತಗಳನ್ನು ತಪ್ಪಿಸಬೇಕೆಂದು ವಿನಂತಿಸುತ್ತೇನೆ.
– ನಾಗರಾಜ ಸಿರಿಗೆರೆ, ದಾವಣಗೆರೆ.