ಮೂರು ತಿಂಗಳುಗಳ ಕಾಲ ಹೆಲ್ಮೆಟ್‌ಗೆ ವಿನಾಯತಿ ನೀಡಿ

ಮಾನ್ಯರೇ,

ಈಗಾಗಲೇ ಬೇಸಿಗೆ ಪ್ರಾರಂಭವಾಗಿ ದಿನದಿಂದ ದಿನಕ್ಕೆ  ರಾಜ್ಯದಾದ್ಯಂತ ರಣಬಿಸಿಲು ಏರುತ್ತಿದ್ದು ಬಿಸಿಲಿನ ತಾಪಕ್ಕೆ ಇಡೀ ಕರುನಾಡೇ ಕಾದ ಕಾವಲಿಯಂತಾಗಿದೆ. ಜನರು ಆಗಸದತ್ತ ಮುಖ ಮಾಡಿ ಯಾವಾಗಪ್ಪ ಮಳೆಗಾಲ ಶುರುವಾಗುತ್ತದೆ ಎಂದು ಹಪ ಹಪಿಸುತ್ತಿದ್ದಾರೆ.  ಇನ್ನೊಂದೆಡೆ ದ್ವಿಚಕ್ರವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಚಾಲಕ ಹಾಗೂ ಹಿಂಬದಿ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವನ್ನು ಸರ್ಕಾರ ಕಡ್ಡಾಯ ಮಾಡಿದೆ, ತಪ್ಪಿದರೆ ದಂಡ ತೆರಬೇಕಾಗುತ್ತದೆ. 

ಕಳೆದೊಂದು ವರ್ಷದಿಂದ ಮಾಸ್ಕ್ ಧರಿಸುವುದನ್ನು ಸರ್ಕಾರ  ಕಡ್ಡಾಯ ಮಾಡಿರುವುದರಿಂದ, ಬೇಸಿಗೆಯ ಸುಡು ಬಿಸಿಲಿನಲ್ಲಿ ಮಾಸ್ಕ್ ಜೊತೆಗೆ  ಹೆಲ್ಮೆಟ್ ಧರಿಸುವುದು ಬಹಳ ಕಷ್ಟಕರವಾಗಿದೆ. ಬಿಸಿಲಿನ ತಾಪಕ್ಕೆ ಚರ್ಮ ಸಂಬಂಧಿ ಕಾಯಿಲೆಗಳು, ಉಸಿರಾಟದ ತೊಂದರೆ  ಮತ್ತಷ್ಟು ಉಲ್ಬಣವಾಗುವ ಜೊತೆಗೆ ಅತಿ ಹೆಚ್ಚಿನ ಉಷ್ಣತೆಯಿಂದ ತಲೆಯ ಕೂದಲುಗಳು ಉದುರಲು ಪ್ರಾರಂಭವಾಗುತ್ತವೆ. 

ರಾಜ್ಯದ ಮುಖ್ಯಮಂತ್ರಿಗಳು, ಸಚಿವರುಗಳು ಸೇರಿದಂತೆ ಜನಪ್ರತಿನಿಧಿಗಳು ಎ.ಸಿ. ಕಾರಿನಲ್ಲಿಯೇ ಸಂಚರಿಸುವುದರಿಂದ ಜನಸಾಮಾನ್ಯರ ಕಷ್ಟಗಳನ್ನು ಹೇಗೆ ತಾನೆ ತಿಳಿಯಲು ಸಾಧ್ಯ? ಜನಪ್ರತಿಧಿಗಳಾದವರು ಕನಿಷ್ಠ ಒಂದು ದಿನವಾದರೂ ಜನಸಾಮಾನ್ಯರೊಂದಿಗೆ ಬೆರೆತು ಜೀವನ ನಡೆಸಿದರೆ ಕಷ್ಟ ಏನೆಂಬುದನ್ನು ಅರಿಯಲು ಸಾಧ್ಯ. 

ರಾಜ್ಯ ಸರ್ಕಾರ ತುರ್ತಾಗಿ ಇತ್ತ ವಿಶೇಷವಾಗಿ  ಗಮನ ಹರಿಸಿ ಕನಿಷ್ಠ ಮೂರ್ನಾಲ್ಕು ತಿಂಗಳುಗಳ ಕಾಲ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ನಿಂದ ವಿನಾಯಿತಿ ನೀಡಬೇಕಾಗಿದೆ.


– ಮುರುಗೇಶ ಡಿ., ದಾವಣಗೆರೆ.

error: Content is protected !!