ನಗರದ ನೂತನ ರೈಲ್ವೆ ನಿಲ್ದಾಣಕ್ಕೆ ಜಗದ್ಗುರು ಜಯದೇವ ಶ್ರೀಗಳ ಹೆಸರಿಡಿ

ನಗರದ ನೂತನ ರೈಲ್ವೆ ನಿಲ್ದಾಣಕ್ಕೆ ಜಗದ್ಗುರು ಜಯದೇವ ಶ್ರೀಗಳ ಹೆಸರಿಡಿ - Janathavaniಮಾನ್ಯರೇ,

ದಾವಣಗೆರೆ ಮಹಾನಗರದ ನೂತನ ರೈಲ್ವೆ ನಿಲ್ದಾಣಕ್ಕೆ ಪರಮಪೂಜ್ಯ ಶ್ರೀ ಜಗದ್ಗುರು ಜಯದೇವ ರೈಲ್ವೆ ನಿಲ್ದಾಣ ಎಂದು ಹೆಸರಿಡಲಿ ಎಂದು ಒಕ್ಕೊರಲಿನಿಂದ ಒತ್ತಾಯಿಸೋಣ.

ದಾವಣಗೆರೆ ಮಹಾನಗರ ಶ್ರೀಗಳವರ ಆಳ್ವಿಕೆ ಅವಧಿಯಲ್ಲಿ, ಧಾರ್ಮಿಕ, ಶೈಕ್ಷಣಿಕ, ಸಮಾಜೋಪಯೋಗಿ, ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸುವುದರ ಮುಖಾಂತರ, ಸಾಕ್ಷರರನ್ನಾಗಿಸುವಲ್ಲಿ, ಸಮಾಜದ ಎಲ್ಲಾ ಸ್ತರದ ಜನರಿಗೆ ಆಶ್ರಯ, ಅಕ್ಷರ, ಅನ್ನ ಕೊಟ್ಟು ಉದ್ಧರಿಸಿದ್ದಾರೆ. ನಗರಕ್ಕೆ ವಿದ್ಯುತ್ ದೀಪ ಬಂದಾಗ ಶ್ರೀಗಳವರ ಲಿಂಗಹಸ್ತದಿಂದ ಸರ್ ಮಿರ್ಜಾ ಇಸ್ಮಾಯಿಲ್ ಅವರೊಂದಿಗೆ ಪ್ರಜ್ವಲಿಸಿದ್ದಾರೆ. 

ನಾಲ್ವಡಿ ಕೃಷ್ಣರಾಜ ವಡೆಯರ್ ಅವರು ಅಂದಿನ ಮೈಸೂರು ರಾಜ್ಯದಲ್ಲಿ ಶ್ರೀ ಜಯದೇವ ಜಗದ್ಗುರುಗಳು ಋಷಿರಾಜರಾಗಿದ್ದರು, ಆಗಿನ ಸಂಸ್ಥಾನದ ಬಿರುದು ಬಾವಲಿಗಳು, ಮೇನಾ, ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಪ್ರಪ್ರಥಮವಾಗಿ ಬಸವ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಣೆಗೆ ತರುವಲ್ಲಿ, ಕರ್ನಾಟಕದ ಗಾಂಧಿ ಎಂದೇ ಹೆಸರಾಗಿದ್ದ ಹರ್ಡೇ ಕರ್ ಮಂಜಪ್ಪ ಹಾಗೂ ದಾವಣಗೆರೆ ವಿರಕ್ತಮಠದ ಅಧ್ಯಕ್ಷರಾಗಿದ್ದ ತ್ರಿವಿಧ ದಾಸೋಹಿ ಶ್ರೀ ಮೃತ್ಯುಂಜಯ ಅಪ್ಪಗಳವರು ಮಾರ್ಗದರ್ಶನ ಮಾಡಿ, ಆಚರಣೆಗೆ ತರುವಲ್ಲಿ ಮುಂಚೂಣಿಯಲ್ಲಿ ಇದ್ದವರು. 

ಮಹಾನಗರದಲ್ಲಿ ಪ್ರಪ್ರಥಮವಾಗಿ ಒಂದು ಮೆಡಿಕಲ್ ಕಾಲೇಜು ಇದ್ದು, ಅದು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮೆಡಿಕಲ್ ಕಾಲೇಜು ಎಂಬ ನಾಮಾಂಕಿತದಲ್ಲಿದೆ. ಅವರ ಲೀಲಾ ವಿಶ್ರಾಂತಿ ಪುಣ್ಯಸ್ಥಳ ಶ್ರೀ ಶಿವಯೋಗಾಶ್ರಮದ ಆವರಣದಲ್ಲಿದೆ. ಇಂತಹ ಹತ್ತು ಹಲವಾರು ನಿದರ್ಶನಗಳನ್ನು ನೀಡಬಹುದಾಗಿದೆ. ಆದುದರಿಂದ ಶ್ರೀ ಜಗದ್ಗುರು ಜಯದೇವ ರೈಲ್ವೆ ನಿಲ್ದಾಣ ಎಂದು ಹೆಸರಿಡುವುದು ಸೂಕ್ತವಾಗಿದೆ.


– ಎಂ.ಕೆ.ಬಕ್ಕಪ್ಪ, ಸಹ ಕಾರ್ಯದರ್ಶಿ, ಶಿವಯೋಗಾಶ್ರಮ ಟ್ರಸ್ಟ್, ದಾವಣಗೆರೆ.

error: Content is protected !!