ಬೆಣ್ಣೆನಗರಿಯು ಕಲಾವಿದರಿಗೆ ತುಪ್ಪವಾಗಲಿ

ಮಾನ್ಯರೇ, 

ನಗರದ ಹಿಂದೂ ಭಕ್ತ ವರ್ಗವನ್ನು 7ನೇ ವರ್ಷದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಅದ್ಧೂರಿಯಾಗಿ ಭಾಗವಹಿಸಿದ್ದನ್ನು ಕಂಡು ಆದ ಸಂತಸವನ್ನು ಮರೆಯುವಂತಿಲ್ಲ. ಅಷ್ಟರ ಮಟ್ಟಿಗೆ ಹೆಮ್ಮೆಯ ವಿಚಾರವಾಗಿದೆ. ಆದರೆ ಶೋಭಾಯಾತ್ರೆಯಲ್ಲಿ ಕೇವಲ ಅಬ್ಬರದ ಡಿಜೆ ಸದ್ದಿನಲ್ಲಿ ಸಾಂಸ್ಕೃತಿಕ ಕಲೆಗಳ ಇಂಪು ಕಾಣದೇ ಇದ್ದದ್ದು ಮಾತ್ರ ಬೇಸರವೆನಿಸಿದೆ.

ದಾವಣಗೆರೆ ನಗರವು ಎಲ್ಲಾ ಕಲೆಗಳನ್ನು ಗೌರವಿಸುವ, ಆರಾಧಿಸುವ ಕಲೆಗಳ ತವರೂರು ಎಂದರೆ ತಪ್ಪಾಗಲಾರದು. ಹಾಗಾಗಿಯೇ ಒಂದು ಕಾಲದಲ್ಲಿ ಸಾಂಸ್ಕೃತಿಕ ನಗರೀ ಎಂಬ ಬಿರುದನ್ನು ದಾವಣಗೆರೆ ಜಿಲ್ಲೆ ಪಡೆದು ಖ್ಯಾತಿ ಹೊಂದಿತ್ತು. ಹೀಗಿರುವಾಗ ನಮ್ಮ ಜಿಲ್ಲೆಯ, ನಾಡಿನ ಸಾಂಪ್ರದಾಯಿಕ ಕಲೆಗಳೂ ಶೋಭಾಯಾತ್ರೆಯಲ್ಲಿ ಇದ್ದರೆ ಶೋಭಾಯಾತ್ರೆಯ ಅಂದವು ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಮುಂದಿನ ವರ್ಷದಲ್ಲಿ ಭಜನೆ ತಂಡಗಳು, ವೀರಗಾಸೆ, ಯಕ್ಷಗಾನ, ವೇಷಧಾರಿಗಳು, ಕಲ್ಲಡ್ಕ ಗೊಂಬೆಗಳು, ಒಂದಿಷ್ಟು ಕಲೆಗಳನ್ನು ಪರಿಚಯಿಸುವ ಟ್ಯಾಬ್ಲೋಗಳು ಕಾಣಲು ಸಿಗಲಿ ಎಂಬುದು ಕೋರಿಕೆಯಾಗಿದೆ.

ಒಂದಿಷ್ಟು ಕಲಾವಿದರಿಗೆ ಇಂತಹ ಶೋಭಾಯಾತ್ರೆಗಳಿಂದ ಅವರ ಕಲೆಗಳಿಂದ ಅವರ ಬದುಕಿಗೆ ವೇದಿಕೆಯಾಗಲಿ ಎಂಬ ಚಿಂತನೆಯೇ ಹೊರತು ಪೂರ್ತಿ ಡಿಜೆ ಸದ್ದಿಗೆ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಡಿಜೆಗಳ ಸಂಖ್ಯೆ ಕಡಿಮೆಯಾಗಿ, ಕಲಾ ಬದುಕನ್ನು ನಂಬಿಕೊಂಡಿರುವ ಕಲಾವಿದರಿಗೆ ಇಂತಹ ಚೆಂದದ ಶೋಭಾಯಾತ್ರೆಯಿಂದ ಅನುಕೂಲವಾಗಲಿ ಎಂಬುದೇ ದಾವಣಗೆರೆ ನಗರದ ಸಾರ್ವಜನಿಕರ ಪರ ವಿನಂತಿ.

-ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.

error: Content is protected !!