ಮಾನ್ಯರೇ,
ಮೂರು ದಶಕಗಳ ಹಿಂದೆ ಇದ್ದ ಹಾಗೇ ದಾವಣಗೆರೆ ನಗರವು ಈಗ ಇಲ್ಲ. ನಗರ ಮಹಾನಗರವಾಗಿ ಬೆಳೆದಿದೆ, ಬೆಳೆಯುತ್ತಿದೆ. ಮುಂದೊಂದು ದಶಕ ಕಳೆದರೆ ಈಗ ಇರುವಂತೆಯೇ ದಾವಣಗೆರೆ ಮಹಾನಗರವು ಇರುವುದಿಲ್ಲ, ಮತ್ತಷ್ಟು ಹಿರಿದಾಗಿ ಬೆಳೆಯುತ್ತದೆ. ಹೀಗಿರುವಾಗ ಆ ಕಾಲದಿಂದ ಈ ಕಾಲಕ್ಕೂ ನಗರದಲ್ಲಿ ಆಟವಾಡಲು ಇರುವ ಮೈದಾನಗಳೆಂದರೆ ಅದು ಕೇವಲ ಜಿಲ್ಲಾ ಕ್ರೀಡಾಂಗಣ ಮತ್ತು ಹೈಸ್ಕೂಲ್ ಮೈದಾನಗಳು ಮಾತ್ರ.
ನಗರ ವಾಸಿಗಳ ಜನಸಂಖ್ಯೆಯು ದಶಕದಿಂದ ದಶಕಕ್ಕೆ ಏರುತ್ತಲೇ ಇದೆ. ಆದರೆ ಸಾರ್ವಜನಿಕರಿಗೆ, ಮಕ್ಕಳಿಗೆ ಆಟವಾಡಲು ಮೈದಾನಗಳು ಎಷ್ಟು ಹೊಸದಾಗಿ ಹೆಚ್ಚಿವೆ? ಎಂಬ ಪ್ರಶ್ನೆಗೆ ಉತ್ತರ ಸಿಗದು! ಉತ್ತರ ಸಿಕ್ಕರೂ ಜೆ.ಹೆಚ್. ಪಟೇಲ್ ನಗರ ಮತ್ತು ಶಿವನಗರದಲ್ಲಿ ಒಟ್ಟು ಹೊಸ ಎರಡು ಮೈದಾನಗಳು ಕಾಣಬಹುದು, ಆದರೆ ಅವುಗಳು ನಗರದ ಹೊರವಲಯದ ಏರಿಯಗಳಲ್ಲಿ ನೆಲೆಯೂರಿವೆ. ತಾಂತ್ರಿಕವಾಗಿ ಮನುಷ್ಯರು ಬಂಧನಕ್ಕೊಳಗಾಗಿ ಆಟೋಪಚಾರವು ಎಲ್ಲಾ ಕೂತ ಕಡೆಯಲ್ಲೇ ನಡೆದು ಹೋಗುತ್ತವೆ ಹೊರತು ದೈಹಿಕವಾಗಿ ಆಟವಾಡದೇ, ಆರಾಮವಾಗಿ ನಡೆಯುವುದನ್ನು ಮರೆಯುತ್ತಿದ್ದಾರೆ. ಇದಕ್ಕೆಲ್ಲಾ ಇರುವ ಕಾರಣಗಳಲ್ಲಿ ಒಂದು ಯಾವುದು ಎಂದರೆ ನಗರದಲ್ಲಿ ಉತ್ತಮ ರೀತಿಯ ಮೈದಾನಗಳು, ವಾಯು ವಿಹಾರಕ್ಕೆ ಸರಿಯಾದ ರೀತಿಯಲ್ಲಿ ಸ್ಥಳಾವಕಾಶ ಇಲ್ಲದೇ ಇರುವುದು.
ನೆಮ್ಮದಿಯ ವಿಚಾರವೇನೆಂದರೆ, ಕೆಲ ವರ್ಷಗಳಿಂದ ಖಾಸಗೀ ಮತ್ತು ಸರ್ಕಾರಿ ಬಸ್ಸು ನಿಲ್ದಾಣ ಕಟ್ಟಡಗಳ ನೂತನ ಕಟ್ಟಡ ನಿರ್ಮಾಣಗೊಂಡು ಈಗಾಗಲೇ ತಾತ್ಕಾಲಿಕ ಸರ್ಕಾರಿ ಬಸ್ಸು ನಿಲ್ದಾಣವು ತನ್ನ ಮೂಲ ಸ್ಥಳಕ್ಕೆ ಸೇರಿಕೊಂಡು ಹೈಸ್ಕೂಲ್ ಮೈದಾನವನ್ನು ಹಳೆಯ ಸ್ವರೂಪಕ್ಕೆ ತರಲು ಸಹಕರಿಸಿದೆ. ಅದರಂತೆಯೇ ತಾತ್ಕಾಲಿಕ ಖಾಸಗೀ ಬಸ್ ನಿಲ್ದಾಣವು ಕೂಡ ತನ್ನ ಮೂಲ ಸ್ಥಳಕ್ಕೆ ಸೇರಿಕೊಂಡು ಹೈಸ್ಕೂಲ್ ಮೈದಾನವನ್ನು ಮೊದಲಿನಂತೆಯೇ ಇರಲು ಸಹಕರಿಸಬೇಕಿದೆ. ವಾಯು ವಿಹಾರಕ್ಕೆ, ಆಟವಾಡಲಿಕ್ಕೆ ಸಾರ್ವಜನಿಕರಿಗೆ ನಿತ್ಯ ಸಿಗುವಂತೆ ಆಗಲಿ. ಮನುಷ್ಯ ಕ್ರೀಡೆ, ಯೋಗ, ವ್ಯಾಯಾಮಗಳಲ್ಲಿ ತೊಡಗಿಸಿಕೊಂಡು ಉತ್ತಮ ಆರೋಗ್ಯ ಪಡೆದುಕೊಳ್ಳಲು ಹೈಸ್ಕೂಲ್ ಮೈದಾನದ ಪಾತ್ರವು ತುಂಬಾ ಮಹತ್ತರವಾದದ್ದಾಗಿದೆ. ಸಾಧ್ಯವಾದರೆ, ಒಂದಿಷ್ಟು ಹೊಸ ಮೈದಾನಗಳು ರೂಪುಗೊಳ್ಳಲಿ, ಅದಕ್ಕಾಗಿ ಸ್ಥಳವನ್ನು ಗುರುತು ಮಾಡಿ ಬೇರೆ ಉದ್ದೇಶಕ್ಕೆ ಹೋಗದ ರೀತಿಯಲ್ಲಿ ದಾವಣಗೆರೆ ಜನತೆಗೆ ದೊರಕಲಿ ಎಂದು ಸಾರ್ವಜನಿಕ ಪರ ವಿನಂತಿ.
ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.