ಪಾಲಿಕೆ ಎದುರೇ ಸಮಸ್ಯೆ ಜೀವಂತ !

ಪಾಲಿಕೆ ಎದುರೇ ಸಮಸ್ಯೆ ಜೀವಂತ !

ಮಾನ್ಯರೇ, 

ದಾವಣಗೆರೆ ನಗರದ ಮಹಾನಗರ ಪಾಲಿಕೆ ಎದುರು ಇರುವ ಕೆಳ ಸೇತುವೆಯ ದಾರಿಗೆ ಸಂಕಷ್ಟಗಳಿಂದ ಮುಕ್ತಿ ದೊರಕುವ ಹಾಗೇ ಕಾಣುತ್ತಿಲ್ಲ. ಪ್ರತಿ ವರ್ಷವೂ ಮಳೆಗಾಲ ಬಂತೆಂದರೆ ಏನಾದರೂ ಸಮಸ್ಯೆಗಳು ಉಲ್ಬಣಿಸುತ್ತವೆ. ಅದು ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಇರಬಹುದು, ಮಳೆ ನೀರು ನಿಂತುಕೊಂಡು ವಾಹನ ಸವಾರರಿಗೆ ಆಗುವ ಪರದಾಟ ಇರಬಹುದು, ರೈಲ್ವೇ ಬ್ರಿಡ್ಜ್ ಕೆಳಗೆ ತೊಟ್ಟಿಕ್ಕುವ ನೀರಿನ ಹನಿಗಳು ಇರಬಹುದು ಹೀಗೆ ಪರಿಪೂರ್ಣವಾಗಿ ಸಮಸ್ಯೆಗಳಿಂದ ಸಾರ್ವಜನಿಕರಿಗೆ ಉಪದ್ರವವನ್ನು ಈ ದಾರಿಯು ಮಾಡುತ್ತಲೇ ಇರುತ್ತದೆ.

ಈ ವರ್ಷದ ಸಮಸ್ಯೆ ಏನೆಂದರೆ, ಸಿಮೆಂಟ್ ರಸ್ತೆಯಿಂದ ಕೂಡಿರುವ ಈ ದಾರಿಯಲ್ಲಿ ಸಿಮೆಂಟ್, ಜಲ್ಲಿ ಕಲ್ಲುಗಳು ಕಳೆದು ಹೋಗಿ ಅದರ ಮತ್ತೊಂದು ಅಂಶ ಕಬ್ಬಿಣದ ಸರಳುಗಳು ಕಾಣಸಿಗುತ್ತಿವೆ! ಪಾಲಿಕೆಯ ಮುಂಭಾಗದ ರಸ್ತೆಯಲ್ಲೇ ಕಾಣಸಿಗುವ ಈ ಸಮಸ್ಯೆಯು ಪಾಲಿಕೆಯ ಅಧಿಕಾರಿಗಳಿಗೆ ಕಾಣದೇ ಇರುವುದು ಬೇಸರದ ಸಂಗತಿ ಆಗಿರುತ್ತದೆ.

ಕಬ್ಬಿಣದ ಸರಳುಗಳು ಆಕಾಶದೆಡೆ ಮುಖ ಮಾಡುವ ಮುಂಚೆಯೇ ದುರಸ್ತಿ ಕ್ರಮವಹಿಸಿ, ಸಮಸ್ಯೆಯ ಜೊತೆ ಮತ್ತೊಂದು ಸಮಸ್ಯೆಯು ಆಗದ ರೀತಿಯಲ್ಲಿ ಶೀಘ್ರವಾಗಿ ಈ ರಸ್ತೆಯಲ್ಲಿ ಇರುವ ಗುಂಡಿಗಳನ್ನು ಕೂಡ ಸರಿಯಾಗಿ ಮುಚ್ಚಿಸಿ ಮತ್ತು ರಾತ್ರಿ ಹೊತ್ತಿನಲ್ಲಿ ಪಾದಚಾರಿಗಳು ನಡೆಯಲು ವಿದ್ಯುತ್ ದೀಪದ ಬೆಳಕನ್ನು ಹೆಚ್ಚಿಸಿ ಎಂದು ನಗರದ ಸಾರ್ವಜನಿಕರ ಪರ ವಿನಂತಿ.

– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.

error: Content is protected !!