ಸಾಮಾನ್ಯ ವಿದ್ಯಾರ್ಥಿಗಳಿಂದ ಪಿಯುಸಿಯಲ್ಲಿ ಅಸಾಮಾನ್ಯ ಫಲಿತಾಂಶ ಪಡೆಯುವುದು ಸಾಧನೆ

ಮಾನ್ಯರೇ,

ರಾಜ್ಯದಲ್ಲಿ ಈಗಾಗಲೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ಪರಿಣಾಮ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯವರು, ತಮ್ಮ ವಿದ್ಯಾರ್ಥಿಗಳು ಸಾಧನೆ ಮಾಡಿರುವ ಕುರಿತು, ಬಣ್ಣ ಬಣ್ಣದ ಜಾಹೀರಾತುಗಳು, ದಿನಂಪ್ರತಿ ದಿನ ಪತ್ರಿಕೆಯಲ್ಲಿ ರಾರಾಜಿಸುತ್ತಿವೆ. ಎಸ್ಸೆಸ್ಸೆಲ್ಸಿ ನಂತರ ಪೋಷಕರಿಗೂ ಕೂಡ ತಮ್ಮ ಮಕ್ಕಳನ್ನು ಒಳ್ಳೆಯ ಪ್ರತಿಷ್ಠಿತ ಕಾಲೇಜಿಗೆ ಸೇರಿಸಬೇಕೆಂಬ ಬಯಕೆ.

ಉತ್ತಮವಾಗಿ ಅಂಕಗಳನ್ನು ಪಡೆದವರೇನೋ, ಒಳ್ಳೆಯ ಪ್ರತಿಷ್ಠಿತ  ಕಾಲೇಜಿನಲ್ಲಿ  ಸುಲಭವಾಗಿ ಸೀಟು ದಕ್ಕಿಸಿಕೊಳ್ಳುತ್ತಾರೆ. ಆದರೆ ಶೇಕಡ 50, ಅದಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ವಿದ್ಯಾರ್ಥಿಗಳಿಗೆ ಕೆಲ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಗುವುದು ಬಹುತೇಕ ಅನುಮಾನ. ಯಾಕೆಂದರೆ ಕಡಿಮೆ  ಅಂಕಗಳು ಎನ್ನುವ ಕಾರಣಕ್ಕೆ ತಿರಸ್ಕರಿಸುತ್ತಾರೆ. ಮುಂದೆಯೂ ಅಂತಹವರಿಂದ ಫಲಿತಾಂಶಕ್ಕೆ ಧಕ್ಕೆಯಾಗುತ್ತದೆ.

ಕಾಲೇಜಿನ ಫಲಿತಾಂಶ ಕುಸಿಯುತ್ತದೆ ಎನ್ನುವ ಕಾರಣಕ್ಕೆ, ಹಾಗಾದರೆ ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೇವಲ ಅಂಕಗಳೇ ಮಾನದಂಡವಾ? ಅವರ ಪ್ರತಿಭೆಗೆ ಬೆಲೆ ಇಲ್ಲವೇ? ಕಾಲೇಜು ಆಡಳಿತ ಮಂಡಳಿಗಳು ಒಂದು ಯೋಚಿಸಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಶೇ. 90, 100 ಅಂಕಗಳನ್ನು ತೆಗೆದಿರುವ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ದ್ವಿತೀಯ ಪಿಯುಸಿಯಲ್ಲಿ, ಅವರಿಂದ ಅಷ್ಟೇ  ಫಲಿತಾಂಶ ತೆಗೆಸುವುದು  ದೊಡ್ಡದೇನಲ್ಲ. ಕನಿಷ್ಠ 40,50 ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಂಡು ಅಂತಹವರಿಂದ 90-100 ಅಂಕಗಳನ್ನು ತೆಗೆಸಬೇಕು ಅದು ನಿಜವಾದ ಸಾಧನೆ. ವಿದ್ಯಾರ್ಥಿಗಳನ್ನು ಕೇವಲ ಅಂಕಗಳ ಮೇಲೆಯೇ ಅಳೆಯಬಾರದು.

8ನೇ ತರಗತಿ ಓದಿರುವ ಸಚಿನ್ ತೆಂಡೂಲ್ಕರ್  ವಿಶ್ವ ಕ್ರಿಕೆಟ್‌ನಲ್ಲಿಯೇ ಅಮೋಘ ಸಾಧನೆ ಮಾಡಿದ್ದಾರೆ. ಇದೊಂದು ಕೇವಲ  ಉದಾಹರಣೆಯಷ್ಟೇ. ಇಂತಹ ಹಲವಾರು ಪ್ರತಿಭೆಗಳು ಕಡಿಮೆ ಓದಿ, ದೊಡ್ಡ  ಸಾಧನೆ ಮಾಡಿದ್ದಾರೆ. ಅಂಕಗಳು ಕೇವಲ ಮಾನದಂಡವಷ್ಟೇ. ಪ್ರತಿಷ್ಠಿತ  ಕಾಲೇಜು ಆಡಳಿತ ಮಂಡಳಿಯವರು, ಕಡಿಮೆ ಅಂಕ ಗಳಿಸಿದವರಿಗೂ ಕೂಡ ಸೀಟು ಕೊಟ್ಟು ಅಂತಹವರಿಂದ ಉನ್ನತ ಸಾಧನೆ ಮಾಡಿಸುವ ಮೂಲಕ ಹೃದಯ ವೈಶಾಲ್ಯ ಮೆರೆಯಲಿ.


– ಮುರುಗೇಶ ಡಿ., ದಾವಣಗೆರೆ.

error: Content is protected !!