ರಾಣೇಬೆನ್ನೂರು, ಮಾ.7- ಬಡವರ ಕೈಗೆಟುಕದ ಬೆಲೆ ಏರಿಕೆ, ಜಿಎಸ್‌ಟಿ ಸುಲಿಗೆ ಮುಂತಾದ ಜನ ವಿರೋಧಿ ನೀತಿಯ ಬಿಜೆಪಿ ಆಡಳಿತದಿಂದ ರಾಜ್ಯದ ಜನತೆ ಬಹಳಷ್ಟು ನೋವು ಅನುಭವಿಸುತ್ತಿದ್ದು, ಅವರನ್ನು ಮನೆಗೆ ಕಳಿಸಲು ಚುನಾವಣೆಯ ದಿನಾಂಕ ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.
ಗ್ಯಾಸ್ ಸಿಲಿಂಡರ್, ಜಿಎಸ್ ಟಿ ಹಾಗೂ ಬೆಲೆ ಏರಿಕೆ ಇವುಗಳ ನಿರ್ವಹಣೆಗೆ ಕಾಂಗ್ರೆಸ್ ಪಕ್ಷ ಪ್ರತಿ ಮನೆಯ ಒಡತಿಗೆ ಪ್ರತಿ ತಿಂಗಳು ಎರಡು ಸಾವಿರ ಸಹಾಯಧನ ಹಾಗೂ ಇನ್ನೂರು ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಕಾರ್ಡ್‌ಗಳನ್ನು ಇಲ್ಲಿನ ವಿನಾಯಕ ನಗರದಲ್ಲಿ ವಿತರಿಸಿದ ಡಾ. ಪ್ರವೀಣ ಖನ್ನೂರ, ಪ್ರಕಾಶ ಕೋಳಿವಾಡ, ಜಟ್ಟೆಪ್ಪ ಕರೇಗೌಡ ಹೇಳಿದರು.
2013ರಲ್ಲಿ ಪಕ್ಷ ನೀಡಿದ್ದ ಪ್ರಣಾಳಿಕೆಯಲ್ಲಿ ಶೇಕಡಾ 95 ರಷ್ಟು ಭರವಸೆಗಳನ್ನು ಪೂರೈಸಿದ ಅಂದಿನ ಮುಖ್ಯಮಂತ್ರಿಗಳು ಅತ್ಯುತ್ತಮ ಆಡಳಿತ ನೀಡಿದರು. ಈ ಬಾರಿಯೂ ಸಹ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಂಡು ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಜನಮೆಚ್ಚುವ ಸರ್ಕಾರ ರಚಿಸಲಿದ್ದಾರೆ ಎಂದರು.
ಇದಕ್ಕೂ ಮೊದಲು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಅಧ್ಯಕ್ಷ ಶೇರು ಕಾಬೂಲಿ, ಮುಖಂಡರಾದ ಕೃಷ್ಣಪ್ಪ ಕಂಬಳಿ, ಪುಟ್ಟಪ್ಪ ಮರಿಯಮ್ಮನವರ, ಅಶೋಕ ಗಂಗನಗೌಡ್ರ, ಶಿವಾನಂದ ಕನ್ನಪ್ಪಳವರ, ಗುರು ಕಂಬಳಿ ಮತ್ತಿತರರಿದ್ದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ಪ್ರಜಾಧ್ವನಿ ಯಾತ್ರೆಯು ದಿನಾಂಕ 11ರಂದು ಸಂಜೆ ರಾಣೇಬೆನ್ನೂರಿಗೆ ಬರಲಿದೆ. ಹಲಗೇರಿ ಬೈಪಾಸ್ ಬಳಿ ಸ್ವಾಗತಿಸಿಕೊಂಡು ಹಳೆ ಹೆದ್ದಾರಿ ಮೂಲಕ ಹಾಯ್ದು ನ್ಯಾಯಾಲಯ, ಮೆಡ್ಲೇರಿ ಕ್ರಾಸ್ ಮೂಲಕ ಬಹಿರಂಗ ಸಭೆ ನಡೆಯುವ ಉರ್ದು ಹೈಸ್ಕೂಲ್ ಮೈದಾನಕ್ಕೆ ತೆರಳಲಿದೆ.