ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅಸಮಾಧಾನ
ರಾಣೇಬೆನ್ನೂರು, ಮಾ. 5- ಐತಿಹಾಸಿಕ ವೀರಶೈವ ಧರ್ಮದ ಅಳವಡಿಕೆ, ಆಚರಣೆ, ಕಟ್ಟುಪಾಡುಗಳ ಪಾಲನೆ ಬಗ್ಗೆ ನಾವು ಗಮನ ಕೊಡದಿರುವುದರಿಂದ ನಮ್ಮ ಧರ್ಮ ಹಿಂದೆ ಉಳಿದಿದೆ ಎಂದು ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಶಂಕರ ಬಿದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ತಾಲ್ಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ಗುರು ರೇಣುಕಾಚಾರ್ಯ ಜಯಂತಿ ಮಹೋತ್ಸವ, ಗುಗ್ಗುಳ, ಶಿವಲಿಂಗ ಸ್ಥಾಪನೆ, ಶಿವಲಿಂಗ ದೀಕ್ಷೆ, ಮಹಾರಥೋತ್ಸವ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
2 ಸಾವಿರ ವರ್ಷಗಳ ಹಿಂದೆ ಹುಟ್ಟಿದ ಕ್ರೈಸ್ತ, 15 ಸಾವಿರ ವರ್ಷಗಳ ಹಿಂದಿನ ಮುಸಲ್ಮಾನ ಧರ್ಮ, 8 ನೂರು ವರ್ಷಗಳ ಹಿಂದಿನ ಲಿಂಗಾಯತ ಧರ್ಮ ಹಾಗೂ 5 ಸಾವಿರ ವರ್ಷಗಳ ಹಳೆಯದಾದ ಸಿಖ್ ಧರ್ಮಗಳ ಆಚರಣೆ ಹಾಗೂ ಬೆಳವಣಿಗೆಗಳ ಬಗ್ಗೆ ಆ ಸಮುದಾಯಗಳು ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದರಿಂದ ಅವುಗಳು ಬಲಗೊಳ್ಳುತ್ತಿವೆ ಎಂದು ಅಭಿಪ್ರಾಯಿಸಿದರು.
ಪರಧರ್ಮಗಳನ್ನ, ಮಾನವ ಕುಲವನ್ನ ಪ್ರೀತಿಸಿ, ಮಾನವ ಧರ್ಮಕ್ಕೆ ಜಯವೆನ್ನುವ ವಿಶಾಲ ತಳಹದಿಯ ಮೇಲೆ ನೆಲೆ ನಿಂತ ವೀರ ಶೈವ ಧರ್ಮವನ್ನು ಬೆಳೆಸುವಲ್ಲಿ ಪ್ರತಿಯೊಬ್ಬ ವೀರಶೈವರ ಸನ್ನದ್ಧರಾಗಬೇಕು. ಈ ಪ್ರಯತ್ನಕ್ಕೆ ರೇಣುಕಾಚಾರ್ಯರ ಜಯಂತಿ ಒಂದು ಸಾಧನವಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ರಾಮಲಿಂಗಣ್ಣನವರ ಮಾತನಾಡಿ, ಸರ್ಕಾರ ಎಂದೋ ಮಾಡಬೇಕಿದ್ದ ರೇಣುಕಾ ಚಾರ್ಯರ ಜಯಂತಿಯನ್ನು ತಡವಾದರೂ ಈಗ ಪ್ರಾರಂಭಿಸಿರುವುದು ಸ್ವಾಗತಾರ್ಹವಾ ಗುವುದು. ನಮ್ಮ ವೀರಶೈವ ಮಠಗಳು ಪ್ರತಿ ವರ್ಷ ರೇಣುಕಾಚಾರ್ಯರ ಜಯಂತಿ ಆಚ ರಣೆ ಮಾಡಿ, ಅವರ ತತ್ವಾದರ್ಶಗಳನ್ನು ಸಮಾಜ ಬಾಂಧವರಿಗೆ ನೆನಪಿಸುತ್ತಾ ಆರೋಗ್ಯಕರ ಸಮಾಜ ನಿರ್ಮಿಸುತ್ತಲೇ ಇವೆ ಎಂದು ಹೇಳಿದರು.
ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ನರಸಾಪುರ ಶಿವಕುಮಾರ. ಶಿವಶರಣರು ಸಾನಿಧ್ಯ ವಹಿಸಿದ್ದರು.
ಸಾರಿಗೆ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಕೈಗಾರಿಕಾ ನಿಗಮದ ನಿರ್ದೇಶಕಿ ಭಾರತಿ ಅಳವಂಡಿ, ಉದ್ಯಮಿ ಗುರು ಶಾಸ್ತ್ರೀ ಮಠ, ಕೆಇಬಿ ಎಂಜಿನಿಯರ್ ಗೋಪಾಲ ಲಮಾಣಿ ಮತ್ತಿತರರಿದ್ದರು. ಪ್ರಾಧ್ಯಾಪಕ ಸಿ.ಎನ್. ಪೂಜಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿಟ್ಟದಹಳ್ಳಿ ಗಂಗಾಧರ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.