ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್
ರಾಣೇಬೆನ್ನೂರು, ಫೆ. 10- ಆಧುನಿಕ ಯುಗದಲ್ಲಿ ಶಿಕ್ಷಣ ಎಂಬುದು ಅತ್ಯಂತ ಪ್ರಬಲವಾದ ಅಸ್ತ್ರ. ನಾವು ಅದನ್ನು ಪಡೆಯದ ಹೊರತು ಯಶಸ್ಸಿನ ಶಿಖರವನ್ನು ಏರಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಪಟ್ಟಣದ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯ, ಸ್ನಾತಕೋತ್ತರ (ಎಂ.ಕಾಂ) ಅಧ್ಯಯನ ಕೇಂದ್ರದ ಸಂಯುಕ್ತ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಯುಜಿ, ಪಿಜಿ ಹಾಗೂ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕಲಿಕಾರ್ಥಿ ಸಹಾಯಕ ಕೇಂದ್ರ ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ರಾಷ್ಟ್ರದ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲವೇ ಶಿಕ್ಷಣ. ಮನುಷ್ಯನಿಗೆ ಮಾನಸಿಕ ಮತ್ತು ಬೌದ್ಧಿಕ ಸಂಸ್ಕಾರ ನೀಡುವ ಮೂಲಕ ಮಾನವೀಯತ್ವ ಪ್ರಾಪ್ತವಾಗಲು ಮೂಲ ಕಾರಣವೇ ಶಿಕ್ಷಣ. ಇದರಲ್ಲಿ ಸಾಮಾನ್ಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಪಾತ್ರವು ಹಿರಿದಾದುದಾಗಿದೆ. ಮೂಲಭೂತ ಶಿಕ್ಷಣದ ಜೊತೆಯಲ್ಲಿಯೇ ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯು ಆಯಾ ರಾಷ್ಟ್ರದ ಉನ್ನತ ಶಿಕ್ಷಣದ ವ್ಯವಸ್ಥೆ, ಗುಣಮಟ್ಟ, ಸುಶಿಕ್ಷಿತರ ಪ್ರಮಾಣ ಮೊದಲಾದುವುಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಮುಖ್ಯಮಂತ್ರಿಗಳು ಸರ್ವಜ್ಞ ಪ್ರಾಧಿಕಾರದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು 25 ಕೋಟಿ ಅನುದಾನಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡುವ ಮೂಲಕ, ಈ ಭಾಗದ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಐಬಿಎಂಆರ್ ಸಮೂಹ ಸಂಸ್ಥೆಗಳ ಫೌಂಡರ್ ಚೇರ್‌ಮನ್ ಡಾ. ವಿನಯಚಂದ್ರ ಮಹೇಂದ್ರಕರ್ ಮಾತನಾಡಿ, ವಿಶೇಷವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕ ಕೊಡುಗೆಯನ್ನು ನೀಡುವ ಶಿಕ್ಷಣವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ಹಾಗೂ ರಾಷ್ಟ್ರದ ಬಗೆಗಿನ ಹಿತ. ಆಸ್ಥೇಯ ರಾಷ್ಟ್ರೀಯತೆಯ ಆಲೋಚನೆಗಳನ್ನು ಸಕಾರಾತ್ಮಕವಾಗಿ ಆಚರಣೆಗೊಳ್ಳುವತ್ತ ಗಮನಹರಿಸುವುದು ಇಂದಿನ ಬದಲಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಕ್ಕೆ ಅಗತ್ಯ ಅನಿವಾರ್ಯವಾಗಿರುವುದನ್ನು ಕಾಣಬಹುದು ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಟಿ.ವಿ.ಎಸ್.ಎಸ್. ಅಧ್ಯಕ್ಷ ಎಸ್.ಬಿ. ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಕೆ.ವಿ. ಸುರೇಶ್, ಡಾ.ಹೆಚ್.ಬಿ. ರಂಜಿತ್‌ಕುಮಾರ್, ಎಸ್. ವೀರಭದ್ರಯ್ಯ, ಎಂ.ವಿ. ಹೊಂಬರಡಿ, ಜೆ.ಬಿ. ತಂಬಾಕದ, ಏಕೇಶಣ್ಣ ಬಣಕಾರ, ರವಿಶಂಕರ ಬಾಳಿಕಾಯಿ, ಶೈಕಣ್ಣ ತಿಮ್ಮಿನಕಟ್ಟಿ, ಜೆ.ವಿ. ಅಂಗಡಿ, ಯು.ಎಸ್. ಕಳಗೊಂಡದ, ಬಿ.ಪಿ. ಹಳ್ಳೇರ, ಹೆಚ್.ಪಿ. ನಾಗರಾಜ್, ಸಿ.ಆರ್. ದೂದೀಹಳ್ಳಿ, ಹರೀಶ್ ಆರ್ಕಾಚಾರ್ಯ, ಸತೀಶ್ ಬಣಕಾರ ಮತ್ತಿತರರಿದ್ದರು.
ಎಸ್.ಎಸ್. ಹುಲ್ಲಿನಕೊಪ್ಪ, ಆಸಿಯಾ ದೌಲತಕೋಟಿ ಕಾರ್ಯಕ್ರಮ ನಿರೂಪಿಸಿದರು.