ಭೇದ ಮರೆತು ಎಲ್ಲರೊಂದಾಗಿ ದೇವರ ತೇರನ್ನೆಳೆಯಬೇಕು

ಭೇದ ಮರೆತು ಎಲ್ಲರೊಂದಾಗಿ ದೇವರ ತೇರನ್ನೆಳೆಯಬೇಕು

ಶಿಡೇನೂರು ಶ್ರೀ ಮುಕ್ತೇಶ್ವರ ಮಂದಿರದ ಉದ್ಘಾಟನೆಯಲ್ಲಿ ಸಿಎಂ ಬೊಮ್ಮಾಯಿ

ರಾಣೇಬೆನ್ನೂರು, ಫೆ. 1- ಒಬ್ಬರೇ ಎಳೆಯುವಂತಹ ಸಣ್ಣ ತೇರುಗಳ್ನು ನಿರ್ಮಿಸದೇ, ಬಡವ-ಬಲ್ಲಿದ, ಧರ್ಮ, ಜಾತಿ, ಅಧಿಕಾರ, ಐಶ್ವರ್ಯ, ಅಂತಸ್ತು ಎಲ್ಲಾ ಭೇದಗಳನ್ನು ಮರೆತು ಎಲ್ಲರೊಂದಾಗಿ ದೇವರ ತೇರನ್ನೆಳೆಯಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ತೇರುಗಳನ್ನು ದೊಡ್ಡದಾಗಿ ನಿರ್ಮಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಬ್ಯಾಡಗಿ ತಾಲ್ಲೂಕು ಶಿಡೇನೂರಿನಲ್ಲಿ ಜೀರ್ಣೋದ್ಧಾರ ಮಾಡಿದ ಶ್ರೀ ಮುಕ್ತೇಶ್ವರ ಮಂದಿರದ ಉದ್ಘಾಟನೆ ಮಾಡಿ ಮಾತನಾಡಿದರು.

ನಮ್ಮ ಮನಗಳಲ್ಲಿರುವ ಎಲ್ಲಾ ಚಿಂತನೆಗಳ್ನು ದೂರಮಾಡಿ ಶಾಂತಿ, ಸಮಾಧಾನದಿಂದ ಸುಂದರ ಬದುಕು ಕಟ್ಟಿಕೊಳ್ಳಲು ದೇವರ ಸಾನ್ನಿಧ್ಯದ ಮಂದಿರಗಳು ಅವಶ್ಯವಿದ್ದುದನ್ನು ಅರಿತ ನಮ್ಮ ಹಿರಿಯರು ಧಾರ್ಮಿಕ, ಅಧ್ಯಾತ್ಮಿಕ ಮಠ ಮಂದಿರಗಳನ್ನು ನಿರ್ಮಾಣ ಮಾಡಿದರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ವಿಶಾಲವಾದ ಬಯಲಿನಲ್ಲಿ ಅತ್ಯಂತ ಸುಂದರವಾಗಿ ಸಂಪೂರ್ಣ ಶಿಲೆಗಳಲ್ಲಿಯೇ ನಿರ್ಮಿಸಿದ ದೇವಸ್ಥಾನ ಹಾಗೂ ಇಲ್ಲಿನ ಪರಿಸರ ಆಕರ್ಷಣೀಯವಾಗಿದ್ದು, ಈ ಗ್ರಾಮ ಶೀಘ್ರದಲ್ಲಿಯೇ ಪ್ರವಾಸಿ ತಾಣವಾಗಲಿದೆ. ಈ ಮಂದಿರದ ನಿರ್ಮಾತೃ ಇದೆ ಗ್ರಾಮದವರಾದ ಹಾವೇರಿಯ ಶಾಸಕ ನೆಹರು ಓಲೇಕಾರ ತನ್ನ ಬೇರುಗಳನ್ನು  ಮರೆತಿಲ್ಲ. ಹಾಗೂ ತನ್ನ ಹುಟ್ಟಿದೂರಿಗೆ ಬೃಹತ್ ಕಾಣಿಕೆ ನೀಡಿದಂತಾಗಿದೆ ಎಂದು ಬೊಮ್ಮಾಯಿ ಶ್ಲ್ಯಾಘಿಸಿದರು.

ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದು, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾರತಿ ಜಂಬಗಿ, ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ಬಾಕಳೆ ಮುಖಂಡರುಗಳಾದ ಸಿ.ಎಸ್. ಬಳ್ಳಾರಿ ಮತ್ತಿತರರಿದ್ದರು. ಶಾಸಕ ನೆಹರು ಓಲೇಕಾರ ಸ್ವಾಗತಿಸಿ, ದೇವಸ್ಥಾನ ನಿರ್ಮಾಣದ ಕುರಿತು  ಪ್ರಾಸ್ತಾವಿಕ ಮಾತಗಳನ್ನಾಡಿದರು.

error: Content is protected !!