ರಾಣೇಬೆನ್ನೂರು, ಜ.25- ನಗರ ದೇವತೆಯರ ಜಾತ್ರಾ ಸ್ಥಳ ತುಂಗಾಜಲ ಹಾಗೂ ಗಂಗಾಜಲಕ್ಕೆ ತೆರಳಲು ಶನೇಶ್ಚರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರ ನೇತೃತ್ವದಲ್ಲಿ ಶಾಸಕ ಅರುಣಕುಮಾರ ಪೂಜಾರ ಜಯಘೋಷದೊಂದಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ದೇವಿಯರ ಕೃಪೆಯಿಂದಾಗಿ ನನ್ನ ಕ್ಷೇತ್ರದ ಜನರಿಗೆ ಕ್ಷೇಮ ಹಾಗೂ ಸಕಲ ಸೌಭಾಗ್ಯಗಳು ದೊರಕಲಿವೆ ಎಂದು ಹೇಳಿದರು.
ಸಚಿವ ಆರ್.ಶಂಕರ್, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ಸದಸ್ಯರಾದ ಶೇಕಪ್ಪ ಹೊಸಗೌಡ್ರ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಶಶಿ ಬಸೇನಾಯ್ಕರ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಮುಖಂಡರುಗಳಾದ ಪ್ರಕಾಶ ಕೋಳಿವಾಡ, ಭಾರತಿ ಜಂಬಗಿ, ಎಸ್.ಎಸ್. ರಾಮಲಿಂಗಣ್ಣನವರ, ಭಾರತಿ ಅಳವಂಡಗಿ, ಬಸವರಾಜ ಹುಚ್ಚಗೊಂಡರ, ಶೇಖಪ್ಪ ನರಸಗೊಂಡರ, ರಾಮಪ್ಪ ಕೋಲಕಾರ, ಮಂಜಪ್ಪ ಗೌಡಶಿವಣ್ಣನವರ, ಸೋಮು ಗೌಡಶಿವಣ್ಣನವರ, ಮಂಜು ಕಾಟಿ, ಕೃಷ್ಣಪ್ಪ ಕಂಬಳಿ ಹಾಗೂ ಎರಡೂ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಇಂದು ಬೆಳಿಗ್ಗೆ ಮಾರುತಿ ನಗರದ ಬೆಂಚಿ ತುಂಗಾಜಲ ಶ್ರೀ ಚೌಡೇಶ್ವರಿ ದೇವಿ ಚೌಕಿಮನೆಗೆ ಬಂದ ಶಾಸಕ ಅರುಣಕುಮಾರ ಪೂಜಾರ ಹಾಗೂ ಅವರ ಪತ್ನಿ, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ ಹಾಗೂ ಮಕ್ಕಳು, ಬಂಧುಗಳ ಜೊತೆ ಸೇರಿ ದೇವಿಗೆ ಎಳೆಯ ಕುರಿಮರಿಯೊಂದನ್ನು ಅರ್ಪಿಸಿ ಹರಕೆ ತೀರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದವು.
ಸರ್ವಾಲಂಕಾರಗೊಂಡ ರಥದಲ್ಲಿ ದೇವಿಯ ಉತ್ಸವ ಮೂರ್ತಿಗೆ ಜೋಗತಿಯರು ಚಾಮರ ಬೀಸಿದರೆ, ಮುತ್ತೈದೆಯರು ಆರತಿ ಬೆಳಗಿದರು. ಬೆಳಿಗ್ಗೆ 11 ಗಂಟೆಗೆ ಸಕಲ ಮಂಗಳ ವಾದ್ಯಗಳು, ಹಾಸ್ಯಗಾರರು, ದೇವಿ ಭಕ್ತರನ್ನೊಳಗೊಂಡ ಮೈಲುದ್ದದ ಮೆರವಣಿಗೆ ಮಾರುತಿ ನಗರದ ಚೌಕಿ ಮನೆಯಿಂದ ಹೊರಟಿದ್ದು ತುಂಗಾಜಲಕ್ಕೆ ನಾಳೆ ಅಂದರೆ ದಿನಾಂಕ 26ರಂದು ಬೆಳಿಗ್ಗೆ ಬರಲಿದೆ.
ಇಂದು ಸಂಜೆ 7 ಗಂಟೆಗೆ ತಳವಾರ ಗಲ್ಲಿ ಯ ಊರ ಮನೆಯಿಂದ ಸಕಲ ವಾದ್ಯಗಳೊಂದಿಗೆ ಹೊರಟ ದೇವಿ ನಾಳೆ ಬೆಳಿಗ್ಗೆ ಗಂಗಾಜಲದ ಜಾತ್ರಾ ಸ್ಥಳದಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ.