ಕೊಟ್ಟೂರು, ಏ.14 – ಕೊಟ್ಟೂರು ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇ ಡ್ಕರ್ ಅವರ 132ನೇ ಜಯಂತಿಯನ್ನು ಹಿರಿಯ ಮುಖಂಡರು ಹಾಗೂ ಯುವಕ ರೊಂದಿಗೆ ಇಂದು ಆಚರಿಸಲಾಯಿತು.
ಡಾ. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಭಾವ ಚಿತ್ರಕ್ಕೆ ಎಂ.ಕುಮಾರಸ್ವಾಮಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಂಬೇಡ್ಕರ್ ಜಯಂತಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಮನುಷ್ಯ ಚಿರಂಜೀವಿ ಯಾಗಲಾರ. ಆದರೆ, ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಗಿಡಕ್ಕೆ ನೀರು ಎಷ್ಟು ಮುಖ್ಯವೋ ಅದೇ ರೀತಿಯಾಗಿ ಒಂದು ಚಿಂತನೆಯು ಸಮಾಜದಲ್ಲಿ ಭಾವಚಿತ್ರಕ್ಕೆ ಪ್ರಸರಣವಾಗುವುದು ನಮಗೆ ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು.
ವಕೀಲ ಮಂಜುನಾಥ್ ಮಾತನಾಡಿ, ಸಮಾನತೆಯ ಸಂದೇಶವನ್ನು ಸಾರಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ದೇಶದ ಅಪ್ರತಿಮ ನಾಯಕ ಎಂದರೆ ತಪ್ಪಾಗಲಾರದು ಎಂದರು.
ಬದ್ದಿ ಮರಿಸ್ವಾಮಿ ಮಾತನಾಡಿ, ಶೋಷಿತ ಹಾಗೂ ದುರ್ಬಲ ವರ್ಗದವರಿಗೆ ಹಕ್ಕುಗಳನ್ನು ನೀಡಿದ ಶ್ರೇಯಸ್ಸು ಸಂವಿಧಾನ ಶಿಲ್ಪಿ ಅಂಬೇಡ್ಕರ್ಗೆ ಸಲ್ಲುತ್ತದೆ. ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ. ನೊಂದವರ, ದೀನ-ದಲಿತರ ಬದುಕು ಬೆಳಗಿಸಿದ ಸೂರ್ಯ. ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ಕಟ್ಟೋಣ ಎಂದರು.
ತೆಗ್ಗಿನಕೇರಿ ಕೊಟ್ರೇಶ್ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಯು ಸಂವಿಧಾನದಡಿಯಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಗೌರವ ನೀಡಿ ಪೂಜಿಸಬೇಕು. ಮಹಿಳೆಯರಿಗೆ ಸಮಾನತೆಯ ಸಂವಿಧಾನ ನೀಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಛಲವಾದಿ ಹೊಟ್ಟೆ ಅಜ್ಜಪ್ಪ ಮಾತ ನಾಡಿ, ಅಂಬೇಡ್ಕರ್ ಅವರ ಜೀವನ, ಧ್ಯೇಯಗಳು, ಆದರ್ಶವಾಗಬೇಕು. ಅವು ಚೇತನಗಳೂ ಆಗಿವೆ. ಇದನ್ನು ಯುವ ಪೀಳಿಗೆ ಅರಿತುಕೊಂಡು ಆದರ್ಶ ಪಥದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ.ನಸ್ರುಲ್ಲಾ, ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಸ್ವಾಮಿ, ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ, ಶಿಕ್ಷಕ ಅಜ್ಜಪ್ಪ, ತಾಲ್ಲೂಕು ಆಡಳಿತ ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆ ಬದ್ಯ ನಾಯಕ್, ಡಾ.ಕೆಇಬಿ ಚೇತನ್ ಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ವೀರಣ್ಣ, ಪಿಎಸ್ಐ ವೆಂಕಟೇಶ್, ವಕೀಲರ ಹನುಮಂತಪ್ಪ, ಟಿ.ಸುರೇಶ್, ಆರ್.ಪರಶುರಾಮ್, ಡಿಎಸ್ಎಸ್ ಜಿಲ್ಲಾಧ್ಯಕ್ಷ ಬದ್ದಿ ದುರ್ಗೇಶ್, ಕುಬೇರಪ್ಪ, ಆರ್.ಅಂಬರೀಶ್, ತಿಮ್ಲಾಪುರ ಮೈಲಪ್ಪ, ಗ್ಯಾಸ್ ಮಂಜುನಾಥ, ಕೊಲ್ಲಾರಿ ಬಿ.ಶಿವು, ವಿವಿಧ ಇಲಾಖೆಯ ಅಧಿಕಾರಿ ವರ್ಗದವರಿದ್ದರು.