ಎಐವೈಎಫ್ ತಾಲ್ಲೂಕು ಸಮ್ಮೇಳನದಲ್ಲಿ ರಾಜ್ಯ ಕಾರ್ಯದರ್ಶಿ ಸಂತೋಷ್ ಹಿರೇಮಠ್
ಹಿಂದುಳಿದ ಮತ್ತು ಬರಪೀಡಿತ ತಾಲ್ಲೂಕು ಜಗಳೂರಿನಲ್ಲಿ ಕೈಗಾರಿಕೆ ಉದ್ಯಮ ಸ್ಥಾಪಿಸಬೇಕು.
– ಸಂತೋಷ್ ಹಿರೇಮಠ್ ಎಐವೈಎಫ್ ರಾಜ್ಯ ಕಾರ್ಯದರ್ಶಿ
ಜಗಳೂರು, ಮಾ.6- ಯುವಜನತೆ ಸಂವಿಧಾನಾತ್ಮಕ ಮೌಲ್ಯ, ಐಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಬೇಕಿದೆ ಎಂದು ಎಐವೈಎಫ್ ರಾಜ್ಯ ಕಾರ್ಯದರ್ಶಿ ಸಂತೋಷ್ ಹಿರೇಮಠ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಎಐವೈಎಫ್ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ದೂರಿದರು.
ಪ್ರತಿಯೊಬ್ಬರೂ ಸಂವಿಧಾನ ಉಳಿಸುವ ಮೂಲಕ ವೈಜ್ಞಾನಿಕ ಮನೋ ವೃತ್ತಿ ಬೆಳೆಸಬೇಕಿದೆ. ಬಡತನ, ಆರೋಗ್ಯ, ನಿರುದ್ಯೋಗ ಸಮಸ್ಯೆಗಳಿಗೆ ಪ್ರಭುತ್ವದ ವಿರುದ್ಧ ಹೊರಾಟ ಅನಿವಾರ್ಯ ಎಂದರು.
ಆಡಳಿತ ಸರ್ಕಾರಗಳು ಪದವೀಧರ ನಿರುದ್ಯೋಗಿ ಯುವಕರಿಗೆ ಅತಿಥಿ ಶಿಕ್ಷಕರ ಹೆಸರಲ್ಲಿ ವಂಚನೆ ಮಾಡುತ್ತಿವೆ. ಪ್ರತಿ ವರ್ಷ ಉದ್ಯೋಗ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಎಐವೈಎಫ್ ತಾಲ್ಲೂಕು ಅಧ್ಯಕ್ಷ ಮಾದಿಹಳ್ಳಿ ಮಂಜಪ್ಪ ಮಾತನಾಡಿ, ಬರಪೀಡಿತ ತಾಲ್ಲೂಕಿನಲ್ಲಿ ಪ್ರತಿ ವರ್ಷ ಸಾವಿರಾರು ನಿರುದ್ಯೋಗಿ ಪದವೀ ಧರರು ಬರುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಕಲ್ಪಿಸಬೇಕು. ಸ್ನಾತಕೋತ್ತರ ಪದವೀ ಕೇಂದ್ರ ಆರಂಭಿಸಬೇಕು. ಡಿಪ್ಲೊಮೋ, ಐಟಿಐ ಕಾಲೇಜು ಉನ್ನತೀಕರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಗೌರವ ಅಧ್ಯಕ್ಷ ಮಹಮ್ಮದ್ ಭಾಷಾ, ಕಟ್ಟಡ ಕಾರ್ಮಿಕರ ಸಂಘಟನೆ ತಾಲ್ಲೂಕು ಅಧ್ಯಕ್ಷ ವೀರಣ್ಣ, ಕಾರ್ಯ ದರ್ಶಿ ತಿಪ್ಪೇಸ್ವಾಮಿ, ಎಐವೈಎಫ್ ಕಾರ್ಯದರ್ಶಿ ದೇವಿಕೆರೆ ಮಧು, ಪದಾಧಿಕಾರಿಗಳಾದ ಕಾನನಕಟ್ಟೆ ರಘು, ಗೌತಮ್, ಮಂಜುನಾಥ್, ಅಂಜಿನಪ್ಪ, ಭರಮಸಮುದ್ರಕುಮಾರ್, ಪ್ರದೀಪ್, ಹನುಮಂತಪ್ಪ, ದೊರೆಸ್ವಾಮಿ, ಚೌಡಪ್ಪ, ಮಲ್ಲಿಕಾ ರ್ಜುನ್, ಮರೇನಹಳ್ಳಿ ಪ್ರವೀಣ್ ಇದ್ದರು.