ಹರಿಹರ, ಮಾ.8- ತಾಲ್ಲೂಕಿನ ನಂದಿಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಲಿಕೋಪಕರಣ ಮತ್ತು ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಾ.ಪಂ.ಸದಸ್ಯ ರಾಜಣ್ಣ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಈ ರೀತಿಯ ಕಲಿಕಾ ಚಟುವಟಿಕಗಳನ್ನು ಹಮ್ಮಿಕೊಳ್ಳುವುದರಿಂದ ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಹಕಾರಿಯಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಪೀಠೋಪಕರಣಗಳನ್ನು ಶಾಲೆಗೆ ಹಸ್ತಾಂತರಿಸಿದರು. ಶಿಕ್ಷಣ ಇಲಾಖೆ ಇಸಿಓ ಹರೀಶ್ ನೋಟಗಾರ ಮಾತನಾಡಿ, ಸ್ಥಳಿಯ ಸಂಸ್ಥೆಗಳು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ ಎಂದರು. ಅಧ್ಯಕ್ಷತೆ ಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಣ್ಣ ವಹಿಸಿದ್ದರು. ಸಿಆರ್‌ಪಿ ಕಟ್ಟ ಚನ್ನಕೇಶವ, ಶ್ರೀಧರ, ಮುಖ್ಯ ಶಿಕ್ಷಕರಾದ ಸಮೀನ ಪರ್ವಿನ್ ಮತ್ತಿತರರು ಉಪಸ್ಥಿತರಿದ್ದರು.