ಹರಪನಹಳ್ಳಿ, ಮೇ 24- ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಸಮಾಜಕೋಸ್ಕರ ಬದುಕುವುದಕ್ಕಿಂತ, ನಿಮ್ಮನ್ನು ನಂಬಿರುವ ನಿಮ್ಮ ಕುಟುಂಬದವರಿಗೋಸ್ಕರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದ ವಕೀಲರ ಸಂಘದಲ್ಲಿ ಆಯೋಜಿಸಲಾಗಿದ್ದ ಸಿವಿಲ್ ಪ್ರಕರಣದ ಪುನಃ ಆರಂಭ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಮಾಡುವ ಕೆಲಸವನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಮಾಡಬೇಕು. ಧರ್ಮ ಮತ್ತು ಕರ್ಮದ ನಡುವೆ ನಾವು ಬದುಕಬೇಕಾಗುತ್ತದೆ. ಮನುಷ್ಯನಿಗೆ ನಕಾರಾತ್ಮಕ ಚಿಂತನೆಗಳ ಬದಲು ಸಕಾರಾತ್ಮಕ ಚಿಂತನೆಗಳನ್ನು ಮಾಡಬೇಕು ಎಂದರು. ನಾವು ಧರ್ಮದ ದಾರಿಯಲ್ಲಿ ನಡೆಯಬೇಕಾಗಿದೆ. ಮಾನವ ಧರ್ಮದಿಂದ ಮಾತ್ರ ಮಾನವನಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ ಮಾತನಾಡಿ, ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜೀ ಆಗುವಂತಹ ಪ್ರಕರಣಗಳನ್ನು ಕಕ್ಷಿದಾರರಿಗೆ ಪರಸ್ಪರ ವಕೀಲರು ಒಪ್ಪಿಸಿ ಸಂಧಾನ ಮಾಡಿಸಬೇಕೆಂದು ವಕೀಲರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲರಾದ ಎನ್.ಮೀನಾಕ್ಷಿ, ನಿರ್ಮಲ, ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ, ಉಪಾಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕಾರ್ಯದರ್ಶಿ ಕೆ. ಆನಂದ, ಹಿರಿಯ ವಕೀಲರಾದ ಪಿ. ಜಗದೀಶ್ ಗೌಡ್ರು, ಕೆ.ಜಗದಪ್ಪ, ಕೆ.ಚಂದ್ರಗೌಡ್ರು, ಆರುಂಡಿ ನಾಗರಾಜ್, ಕೆ.ಬಸವರಾಜ್, ಆರ್.ರಾಮನಗೌಡ್ರು, ಬಿ.ರೇವನಗೌಡ, ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಇದ್ದರು.