ಹರಪನಹಳ್ಳಿ, ಮೇ 10- ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಸಣ್ಣಪುಟ್ಟ ವಾಗ್ವಾದಗಳನ್ನು ಹೊರತುಪಡಿಸಿ, ಶಾಂತಿಯುತ ಮತದಾನವಾಗಿದೆ.
ಬೆಳಿಗ್ಗೆ 7ರಿಂದ ನಿಧಾನವಾಗಿ ಆರಂಭವಾದ ಮತದಾನ, ನಂತರ ಚುರುಕುಗೊಂಡಿತು. ಸಂಜೆಯ ಹೊತ್ತಿಗೆ ಬಿರುಸಿನಿಂದ ಮತದಾನ ಜರುಗಿತು.
ಕುಂಚೂರು ಕೆರೆ ತಾಂಡಾದ ಮತಗಟ್ಟೆಯಲ್ಲಿ ಮಧ್ಯಾಹ್ನ 12ರ ಸಮಯದಲ್ಲಿ ಮತಗಟ್ಟೆ ಕೇಂದ್ರದ ಹೊರ ಗೋಡೆಗೆ ಅಂಟಿಸಲಾದ ಅಭ್ಯರ್ಥಿಗಳ ವಿವರ ಇರುವ ಪೋಸ್ಟರ್‍ನಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ ರವರ ಚಿತ್ರವನ್ನು ಯಾರೋ ಹಾಳು ಮಾಡಿದ ಕಾರಣ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಗೋಡೆಯಿಂದ ತೆಗೆಸಿದರು.
ವಡ್ಡಿನ ದಾದಾಪುರ ಹಾಗೂ ಗೋವೇರಹಳ್ಳಿ ಮತ ಕೇಂದ್ರಗಳಲ್ಲಿ ಮತದಾನ ಆರಂಭವಾಗಿ 3 ಗಂಟೆಯ ನಂತರ ವಿವಿ ಪ್ಯಾಟ್‍ನಲ್ಲಿ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಯಿತು.
ಕೆಲವೊಂದು ಕಡೆಗಳಲ್ಲಿ ಅಣಕು ಮತದಾನಕ್ಕೂ ಪೂರ್ವದಲ್ಲಿ 3 ವಿವಿ ಪ್ಯಾಟ್, 1 ಕಂಟ್ರೋಲ್ ಯೂನಿಟ್, 1 ಬ್ಯಾಲೆಟ್ ಯೂನಿಟ್ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದೆ.
ಮತದಾನ ಮಾಡಿದ ಪ್ರಮುಖರು: ಬಿಜೆಪಿ ಅಭ್ಯರ್ಥಿ, ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಶಿಕ್ಷಕರ ಕಾಲೋನಿಯ ಮತಗಟ್ಟೆ 101ರಲ್ಲಿ ಪತ್ನಿ, ಇಬ್ಬರು ಪುತ್ರರು ಸಮೇತ ಆಗಮಿಸಿ, ವಿಧಾನಸಭಾ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಮತದಾನ ಮಾಡಿದರು.
ನಂತರ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ, ಉತ್ತಮ ಪ್ರತಿಕ್ರಿಯೆ ಇದ್ದು, ಜಯ ಗಳಿಸುವ ವಿಶ್ವಾಸ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ಕೊಟ್ರೇಶ್ ಸ್ವಗ್ರಾಮ ಅರಸೀಕೆರೆಯಲ್ಲಿ ಮತದಾನ ಮಾಡಿದರು. ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾರವರು ಪಟ್ಟಣದ ಉಪ್ಪಾರಗೇರಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಬಳ್ಳಾರಿ ಸಂಸದ ವೈ.ದೇವೆಂದ್ರಪ್ಪ ಸ್ವಗ್ರಾಮ ತಾಲ್ಲೂಕಿನ ಅರಸೀಕೆರೆಯಲ್ಲಿ ಪತ್ನಿ ಸಮೇತರಾಗಿ ಮತ ಚಲಾಯಿಸಿದರು. ಪಟ್ಟಣದ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಸ್ವಾಮೀಜಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಬಾಲಕಿಯರ ಪ್ರೌಢಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.
ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.