ಚನ್ನಗಿರಿ, ಅ.27- ಪಟ್ಟಣದ ಬೀರೂರು ರಸ್ತೆಯ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮತ್ತು ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಕಳೆದ 15 ದಿನಗಳಿಂದ ನಡೆಸುತ್ತಿದ್ದ ವಾಲ್ಮೀಕಿ ನಾಯಕ ಸಮಾಜದ ನಿರಶನವು ಎಡಿಸಿ ಲೋಕೇಶ್ ಅವರ ಮನವೊಲಿಕೆಯಿಂದ ಗುರುವಾರ ಪ್ರತಿಭಟನಾಕಾರರು ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ಮಾತನಾಡಿ, ಪುರಸಭೆಯ ಸದಸ್ಯರು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸುವ ಮೂಲಕ ನಮಗೆ ಮೊದಲ ಹಂತದಲ್ಲಿ ಸಹಕಾರ ನೀಡಿದ್ದಾರೆ. ಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದು, ಕಾನೂನಾತ್ಮಕವಾಗಿ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ನಿರಶನ ಅಂತ್ಯಗೊಳಿಸಿರುವುದಾಗಿ ತಿಳಿಸಿದರು.
ಸತ್ಯಸೋಧನಾ ಸಮಿತಿ ವರದಿ : ಎಡಿಸಿ ಲೋಕೇಶ್ ಮಾತನಾಡಿ, ಚನ್ನಗಿರಿಯ ಬೀರೂರು ರಸ್ತೆಯ ವೃತ್ತದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸತ್ಯಶೋಧನಾ ಸಮಿತಿ ನಿಯೋಜಿಸಿದ್ದು, ಅವರು ವರದಿ ನೀಡಿದ್ದಾರೆ. ಪುರಸಭೆಯ ಸದಸ್ಯರೂ ಸಹ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ನೀಡಿದ್ದು, ಈ ಎಲ್ಲಾ ವಿಷಯಗಳನ್ನು ಪರಾಮರ್ಶಿಸಿ ಯಾರಿಗೂ ನೋವಾಗದಂತೆ ಜಿಲ್ಲಾಡಳಿತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಡಿವೈಎಸ್ಪಿ ಪ್ರಶಾಂತ್ ಮುನೋಳಿ, ತಹಶೀಲ್ದಾರ್ ಎರ್ರಿಸ್ವಾಮಿ, ಸಮಾಜದ ಮುಖಂಡ ಪಿ. ಲೋಹಿತ್ಕುಮಾರ್, ನಾಯಕ ಸಮಾಜದ ನಗರ ಘಟಕದ ಅಧ್ಯಕ್ಷ ಜಯರಾಂ,
ಮಹಾರುದ್ರಪ್ಪ, ಸ್ವಾಭಿಮಾನಿ ವಾಲ್ಮೀಕಿ ಯುವ ವೇದಿಕೆಯ ಅಧ್ಯಕ್ಷ ನವೀನ್, ರುದ್ರೇಶ್, ರಾಘು ದೊಡ್ಮನಿ, ನಿವೃತ್ತ ಉಪನ್ಯಾಸಕ ಡಾ ಎ.ಬಿ. ರಾಮಚಂದ್ರಪ್ಪ, ಗಾದ್ರಿ ರಾಜು, ಜಯಣ್ಣ, ಬಿ.ವಿ. ನಾಯಕ, ತ್ಯಾವಣಿಗೆ ಜ್ಞಾನೇಶ್, ಸುಣಿಗೆರೆ ಕುಮಾರ್, ಬಸವಾಪುರ ರಂಗನಾಥ್,
ಪ್ರಶಾಂತ್ ಸೇರಿದಂತೆ ಇನ್ನು ಅನೇಕರು ಈ ವೇಳೆ ಹಾಜರಿದ್ದರು.