ಚನ್ನಗಿರಿ, ಏ. 26- ಭಾರತ ಸಂವಿಧಾನ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿದೆ. ಮತದಾನ ಹಕ್ಕು ಮಾತ್ರವಲ್ಲದೇ ಜವಾಬ್ದಾರಿ ಸಹ ಆಗಿದೆ. ಮತದಾನ ಮಾಡದೇ ಜನಪ್ರತಿನಿಧಿಗಳನ್ನು ದೂಷಿಸುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಹಿಟ್ನಾಳ್ ತಿಳಿಸಿದರು.
ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ದಂತೆ ಚನ್ನಗಿರಿ ತಾಲ್ಲೂಕು ಶಾಂತಿಸಾಗರದಲ್ಲಿ ಮತದಾನ ಜಾಗೃತಿ ಅಭಿಯಾನ ಭಾಗವಾಗಿ ಭಾನುವಾರ ಆಯೋಜಿಸಿದ್ದ ಸಾಹಸ ಜಲ ಕ್ರೀಡೆಯಲ್ಲಿ ಭಾಗವಹಿಸಿ, ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.
ಮತದಾನದ ಜವಾಬ್ದಾರಿಯಿಂದ ನುಣುಚಿ ಕೊಂಡು ಆಶೋತ್ತರಗಳನ್ನು ಈಡೇರಿಸದವರನ್ನು ದೂಷಿಸುವುದು ತರವಲ್ಲ, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಪ್ರಶ್ನಿಸುವ ಹಕ್ಕನ್ನು ಪಡೆಯ ಬಹುದು ಎಂದರು. ಕಳೆದ ಚುನಾವಣೆಯಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.79.91ರಷ್ಟು ಮತದಾನ ಪ್ರಮಾಣ ದಾಖಲಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಶೇ.90ರಷ್ಟು ಮತದಾನದಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಜ್ಞಾವಂತರಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.