ಹರಿಹರ : ಜನವಿರೋಧಿ ನೀತಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಸ್. ರಾಮಪ್ಪ
ಹರಿಹರ, ಆ. 21- ಕೇಂದ್ರ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವಾರು ತಿದ್ದುಪಡಿ ಮಾಡುವುದಕ್ಕೆ ಕೈ ಹಾಕಿರುವುದು ರೈತರ ವಿರುದ್ಧವಾಗಿದ್ದು, ಇದು ಸರಿಯಾದ ಬೆಳವಣಿಗೆಯಲ್ಲ. ಸರ್ಕಾರ ಈ ಪ್ರವೃತ್ತಿಯನ್ನು ಕೈ ಬಿಟ್ಟು ಅಭಿವೃದ್ಧಿ ಕಡೆ ಚಿಂತನೆ ಮಾಡುವುದು ಸೂಕ್ತ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ನಿನ್ನೆ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ವೇಳೆ ಅವರು ಮಾತನಾಡಿದರು.
ದೇಶದ ಜನತೆಗೆ ಭೂ ಸುಧಾರಣೆ ತಿದ್ದು ಪಡಿ, ಎಪಿಎಂಸಿ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿದಂತೆ ದಿನಕ್ಕೊಂದು ಇಲಾಖೆ ಯನ್ನು ತಮಗೆ ಇಷ್ಟ ಬಂದಂತೆ ತಿದ್ದುಪಡಿ ಮಾಡಲಾಗುತ್ತಿದೆ. ಬಿಜೆಪಿ ಪಕ್ಷದವರು ತಮ್ಮ ಅನುಕೂಲಕ್ಕೆ ಬೇಕಾಗುವ ಹಾಗೆ ಆಡಳಿತದ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆಯೇ ವಿನಃ ಸಾರ್ವಜನಿಕರ ಒಳಿತಿಗಾಗಿ ಯಾವುದೇ ರೀತಿಯ ತಿದ್ದುಪಡಿಯನ್ನು ಮಾಡುವುದಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಎಪಿಎಂಸಿ ಸದಸ್ಯ ಮಂಜುನಾಥ್ ಪಾಟೀಲ್ ಕುಮಾರನಹಳ್ಳಿ ಮಾತನಾಡಿ, ರಾಜ್ಯದಲ್ಲಿ 160 ಕೃಷಿ ಉತ್ಪನ್ನ ಮಾರುಕಟ್ಟೆಗಳು, 250 ಉಪ ಮಾರುಕಟ್ಟೆ ಇದ್ದು ವಾರ್ಷಿಕ 600 ಕೋಟಿ ತೆರಿಗೆ ರೂಪದಲ್ಲಿ ಸಂಗ್ರಹಿಸುತ್ತಿತ್ತು. ಸೆಕ್ಷನ್ 8 ಮತ್ತು 117 ತಂದಿರುವ ತಿದ್ದುಪಡಿಯಿಂದಾಗಿ ದೊಡ್ಡ ವ್ಯಾಪಾರಿಗಳು ಮತ್ತು ಕಂಪನಿಗಳು ನೇರವಾಗಿ ರೈತರಿಂದ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಮಧ್ಯವರ್ತಿಗಳು ಮತ್ತು ದಲ್ಲಾಳಿಗಳನ್ನು ದೂರವಿಡಬೇಕು ಎಂಬ ಉದ್ದೇಶ ವಿಫಲವಾಗಿ ಮತ್ತೆ ದಲ್ಲಾಳಿಗಳ, ಮಧ್ಯವರ್ತಿಗಳ ಮರ್ಜಿಗೆ, ದಬ್ಬಾಳಿಕೆಗೆ ರೈತರು ಬಲಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. ರೈತರು ಮೋಸ ವಂಚನೆಗೆ ಒಳಗಾದರೆ ಬಗೆಹರಿಸುವ ಯಾವುದೇ ವ್ಯವಸ್ಥೆ ಇಲ್ಲದೆ ಶೋಷಣೆಗೊಳಗಾಗುವ ಸಾಧ್ಯತೆಗಳು ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಅಕ್ರಮವಾಗಿ ಹಣವನ್ನು ಗಳಿಸಲು ಭೂ ಸುಧಾರಣೆ ಕಲಾಂ 63 ತಿದ್ದುಪಡಿ ಕೆಲಸಕ್ಕೆ ಕೈ ಹಾಕಿದೆ. ಹಸಿರು ಬಣ್ಣದ ಶಾಲು ಹಾಕಿಕೊಂಡು ರೈತರಿಗೆ ಅನುಕೂಲ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರಿಗೆ ಬೆನ್ನಿಗೆ ಚಾಕು ಹಾಕುವ ಕೆಲಸವನ್ನು ಮಾಡುವುದರ ಜೊತೆಯಲ್ಲಿ ಎಲ್ಲಾ ವರ್ಗದ ರೈತ ಸಮುದಾಯಕ್ಕೆ ಅನ್ಯಾಯ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ಮುಖಂಡ ಜಿಗಳಿ ಆನಂದಪ್ಪ ಮಾತನಾಡಿ, ರಾಜ್ಯದ ಆರೋಗ್ಯ ಸೇವೆ ಕುಸಿದು ಬಿದ್ದಿದ್ದು ಕೊರೊನಾ ಬಾಧಿತರು ಆಸ್ಪತ್ರೆಯಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಇತರೆ ರೋಗಗಳಿಂದ ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ಸಿಗುತ್ತಿಲ್ಲ. ಕೊರೊನಾ ವಿಚಾರದಲ್ಲಿ ಸರ್ಕಾರ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸುತ್ತಿದೆ. ಈ ಕುರಿತು ಕೇಂದ್ರ ಸರ್ಕಾರವು ಗಮನವನ್ನು ಹರಿಸುವುದನ್ನು ಬಿಟ್ಟು ರೈತರಿಗೆ ತೊಂದರೆ ಕೊಡುವ ಉದ್ದೇಶದಿಂದ ಭೂ ಸುಧಾರಣೆ ತಿದ್ದುಪಡಿ ತರುವುದಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದರಿಂದ ಮುಂದೆ ಅವರು ದೊಡ್ಡ ಪ್ರಮಾಣದಲ್ಲಿ ರೈತರ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಮಾಜಿ ನಗರಸಭೆ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಕೆ.ಪಿ ಗಂಗಾಧರ್ ಮಲೇಬೆನ್ನೂರು, ಎಲ್. ಬಿ. ಹನುಮಂತಪ್ಪ, ಅಭಿದಾಲಿ, ಸಿ.ಎನ್. ಹುಲಗೇಶ್, ಕೆ. ಜಡಿಯಪ್ಪ, ಹನುಮಂತಪ್ಪ ರೆಡ್ಡಿ, ತಿಪ್ಪೇಶ್, ಆನಂದ್ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.