ಸ್ವಚ್ಛತೆ ಬಗ್ಗೆ ಜಾಗೃತರಾಗಿ ಪ್ರತಿಯೊಬ್ಬರೂ ಸಹಕರಿಸಬೇಕು : ಪಪಂ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ
ಜಗಳೂರು, ನ.21- ಸ್ವಚ್ಛತೆಯ ಬಗ್ಗೆ ಜಾಗೃತರಾಗಿ ಪ್ರತಿಯೊಬ್ಬರೂ ಸಹಕರಿಸುವ ಮೂಲಕ ಸ್ವಚ್ಛ ಮಾದರಿ ಪಟ್ಟಣವನ್ನಾಗಿಸಲು ಸಹಕರಿಸಬೇಕು ಎಂದು ನೂತನ ಪ.ಪಂ. ಅಧ್ಯಕ್ಷ ಆರ್.ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮನೆ-ಮನೆ ಕಸ ಸಂಗ್ರಹ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಕಸ ಹಾಗೂ ಒಣ ಕಸವನ್ನಾಗಿ ವಿಂಗಡಿಸಿ ಹಾಕು ವುದರಿಂದ ಘನತ್ಯಾಜ್ಯ ವಿಲೇವಾರಿ ಅನುಕೂಲವಾ ಗಲಿದೆ. ತರಕಾರಿ ಹಾಗೂ ಜೈವಿಕವಾಗಿ ಕೊಳೆಯುವ ವಸ್ತುಗಳು ಹಸಿ ಕಸವಾಗಿದ್ದು, ಪ್ಲಾಸ್ಟಿಕ್, ರಬ್ಬರ್, ಪೇಪರ್, ಬಟ್ಟೆ, ಬಾಟಲಿಗಳು ಸೇರಿದಂತೆ ಪುನರ್ ಬಳಕೆಯಾಗುವ ತ್ಯಾಜ್ಯ ವಸ್ತುಗಳಾಗಿದ್ದು, ಇವುಗಳ ಬೇರ್ಪಡಿಕೆಯಿಂದ ವಿಲೇವಾರಿ ಮಾಡಲು ಸುಲಭವಾಗಲಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಈಗಾಗಲೇ ಪಪಂ ವತಿಯಿಂದ ಸಿಬ್ಬಂಧಿಗಳು ಮನೆ ಬಾಗಿಲಿಗೆ ಧ್ವನಿವರ್ಧಕದೊಂದಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಇದೀಗ ಸ್ವಚ್ಛ ಪಟ್ಟಣವನ್ನಾಗಿ ಮಾಡಲು ಜಿಲ್ಲಾಡಳಿತದ ಸಹಕಾರದೊಂದಿಗೆ ಪಪಂ ಜಾಗೃತಿ ಜಾಥಾದ ಮೂಲಕ ಸ್ವಚ್ಛತಾ ಆಂದೋಲನ ಕೈಗೊಂಡಿದೆ.
ಖಾಲಿ ನಿವೇಶನ ಮಾಲೀಕರಿಗೆ ಖಡಕ್ ಸೂಚನೆ: ಖಾಲಿ ನಿವೇಶನಗಳನ್ನು ಉಳ್ಳವರು ನಿವೇಶನಗಳಲ್ಲಿ ಬೆಳೆದಿರುವ ಗಿಡ ಗಂಟೆ ಸೇರಿದಂತೆ ಕಸವನ್ನು ಸ್ವತಃ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಪಪಂ ವತಿಯಿಂದ ಸ್ವಚ್ಛಗೊಳಿಸಿ ತಗಲುವ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಮಾಲೀಕರಿಂದಲೇ ವಸೂಲಿ ಮಾಡಲಾಗು ವುದು. ಪ್ರಕಟಣೆ ಹೊರಡಿಸಿದ 15 ದಿನಗ ಳೊಳಗಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇ ಕೆಂದು ಅಧ್ಯಕ್ಷರು ಖಡಕ್ ಸೂಚನೆ ನೀಡಿದರು.
ಮುಖ್ಯಾಧಿಕಾರಿ ರಾಜು ಡಿ.ಬಣಕಾರ್ ಮಾತನಾಡಿ, ಪಟ್ಟಣದಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಾಗಿದ್ದು, ಇತ್ತೀಚೆಗೆ ಸಾರ್ವಜನಿಕರಿಗೆ ತೀವ್ರತರದ ತೊಂದರೆಗಳಾಗಿರುವ ಬಗ್ಗೆ ದೂರುಗಳು ಬಂದಿದ್ದು, ಒಂದೆರಡು ದಿನಗಳಲ್ಲಿ ಜಾನುವಾರುಗಳ ಮಾಲೀಕರೊಂದಿಗೆ ಸಭೆ ನಡೆಸಿ ದನಗಳನ್ನು ರಸ್ತೆಗಳಿಗೆ ಬಿಡದಂತೆ ಕ್ರಮ ಕೈಗೂಳ್ಳಲಾಗುವುದು. ಹಂದಿಗಳ ಸಂಖ್ಯೆ ಹೆಚ್ಚಿದ್ದು, ಸಾಕಾಣಿಕೆದಾರರಿಗೆ ವರಾಹ ಶಾಲೆಗಳಿಗೆ ಬಿಡುವಂತೆ ಸೂಚನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಲಲಿತಮ್ಮ ಶಿವಣ್ಣ, ಸದಸ್ಯರಾದ ನವೀನ್ ಕುಮಾರ್, ದೇವರಾಜ್, ರೇವಣ್ಣ, ಪಾಪಲಿಂಗಪ್ಪ, ಲೋಕಮ್ಮ ಓಬಣ್ಣ, ಶಕೀಲ ಅಹಮದ್, ರಮೇಶ್, ರುದ್ರಮುನಿ, ಬಿ.ಪಿ.ಸುಭಾನ್, ಗಿರೀಶ್, ಮಂಜಮ್ಮ, ವಿಶಾಲಾಕ್ಷಿ ಸೇರಿದಂತೆ ಪಪಂ ಸಿಬ್ಬಂಧಿ ವರ್ಗದವರು ಹಾಜರಿದ್ದರು.