ದಾವಣಗೆರೆ, ಜು.15- ತಮಗೆ ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿಪಡಿಸಬೇಕೆಂ ಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ಕೈಗೊಂಡಿರುವ ಅನಿರ್ದಿಷ್ಟ ಹೋರಾಟದ ಭಾಗವಾಗಿ ನಗರದಲ್ಲಿ ಇಂದು ಪತ್ರ ಚಳವಳಿ ನಡೆಸಿದರು.
ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಳೆದ ವಾರದಿಂದ ವಿವಿಧ ಹಂತದಲ್ಲಿ ಹೋರಾಟವನ್ನು ನಡೆಸುತ್ತಿದ್ದು, ನಗರದ ಪ್ರಧಾನ ಅಂಚೆ ಕಚೇರಿ ಎದುರು ಜಮಾಯಿಸಿದ್ದ ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಪತ್ರ ಬರೆದು ಅಂಚೆ ಮುಖೇನ ಮುಖ್ಯಮಂತ್ರಿಗಳಿಗೆ ರವಾನಿಸಿದರು.
ಕೋವಿಡ್-19 ಸಂದಿಗ್ಧ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ಗುಣಮಟ್ಟದ ಸಮರ್ಪಕ ರಕ್ಷಣಾ ಸಾಮಗ್ರಿ ಒದಗಿಸಬೇಕು, ಕೋವಿಡ್-19 ಸೋಂಕಿಗೆ ಒಳಗಾದ ಆಶಾಗಳಿಗೆ ಪರಿಹಾರ, ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ಮಾತನಾಡಿ, ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಬಾಣಂತಿಯರು, ಮಕ್ಕಳ ಆರೈಕೆಗೆ ಮುತುವರ್ಜಿ ವಹಿಸುತ್ತಿದ್ದಾರೆ. ಆಶಾಗಳ ಸೇವೆಯಿಂದಾಗಿಯೇ ಇಂದು ತಾಯಿ, ಶಿಶುಗಳ ಮರಣ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ ಎಂದರು.
ನಾಲ್ಕು ತಿಂಗಳಲ್ಲಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶವೆನ್ನದೇ ಕೋವಿಡ್-19 ಸರ್ವೇಯಲ್ಲಿ ತಮ್ಮ ಪ್ರಾಣದ ಹಂಗು, ಕುಟುಂಬದ ಹಿತ ಬದಿಗಿ ಟ್ಟು ದುಡಿಯುತ್ತಿರುವ ಆಶಾ ಬೇಡಿಕೆಗೆ ಸರ್ಕಾರ ಮೊದಲು ಸ್ಪಂದಿಸಲಿ ಎಂದು ಒತ್ತಾಯಿಸಿದರು.
ಪತ್ರ ಚಳವಳಿಯಲ್ಲಿ ಕೆ. ಭಾರತಿ, ಎ. ನಾಗರತ್ನ, ಶಕುಂತಲ, ರುಕ್ಕಮ್ಮ, ಮಹಾದೇವಿ, ರೇಖಾ, ಲಕ್ಷ್ಮೀಬಾಯಿ, ಭಾರತಿ, ಪುಷ್ಪಾ, ಶೀಲಾ, ಸರ್ವಮಂಗಳಾ, ನಾಗವೇಣಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.