ಕೊರೊನಾ ವಿಚಾರದಲ್ಲಿ ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆ

ಹರಿಹರ : ವ್ಯಾಪಾರಸ್ಥರ ಸಭೆಯಲ್ಲಿ ಕಿಡಿಕಾರಿದ ಶಾಸಕ ಎಸ್. ರಾಮಪ್ಪ 

ಹರಿಹರ, ಜು.15- ನಗರದಲ್ಲಿ ಕೊರೊನಾ ಪ್ರಕರಣ ತಡೆಗಟ್ಟುವ ವಿಚಾರದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುವುದಾಗಿ ಶಾಸಕ ಎಸ್.ರಾಮಪ್ಪ ಎಚ್ಚರಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ವ್ಯಾಪಾರಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಮಾಜಿ ಶಾಸಕ ಬಿ.ಪಿ. ಹರೀಶ್‌ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಭೆಯಲ್ಲಿ ನಗರದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ವ್ಯಾಪಾರ, ವಹಿವಾಟು ಮಾಡುವುದಕ್ಕೆ ಅವಕಾಶ ಕಲ್ಪಿಸಿರುವುದು ಮತ್ತು ಅದನ್ನು ತಹ ಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು ಸೂಚನೆ ನೀಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿ, ಕೊರೊನಾ ವಿಚಾರಗಳನ್ನು ರಾಜಕೀಯಕ್ಕೆ ತಂದು ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಿದ್ದಾರೆ. ಈ ಬೆಳವಣಿ ಗೆಯನ್ನು ಅಧಿಕಾರಿಗಳು ಕೈ ಬಿಡದಿದ್ದರೆ, ಮುಂದೆ ಅದಕ್ಕೆ ತಕ್ಕ ಉತ್ತರ ನೀಡಬೇಕಾಗು ತ್ತದೆ ಎಂದು ರಾಮಪ್ಪ ಕಿಡಿಕಾರಿದರು.

ಛೇಂಬರ್ ಆಫ್ ಕಾಮರ್ಸ್‌ನವರು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಮಾಡಿ, ಸಾರ್ವಜನಿಕರ ಮತ್ತು ವ್ಯಾಪಾರಸ್ಥರ ಹಿತದೃಷ್ಟಿಯಿಂದ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಿ, ನಂತರದಲ್ಲಿ ಅಂಗಡಿಗಳನ್ನು ಬಂದ್ ಮಾಡು ವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಎಲ್ಲಾ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದರು. ಇದರಿಂದಾಗಿ ಕೊರೊನಾ ಪ್ರಕರಣಗಳು ಹತೋಟಿ ಮೀರಿ ಹೋಗಿರಲಿಲ್ಲ. 

ಬೆಳಿಗ್ಗೆಯಿಂದ ರಾತ್ರಿ 8 ರವರೆಗೆ ವ್ಯಾಪಾರ ವಹಿವಾಟು ಮಾಡುವುದರಿಂದ ಕೊರೊನಾ ರೋಗದ ಪ್ರಕರಣಗಳು ಹೆಚ್ಚಾಗಿ ಸಾರ್ವಜನಿಕರು ಸಂಕಷ್ಟದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಬಳಿ ಚರ್ಚೆ ಮಾಡಿ, ನಗರದಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಸಭೆಯನ್ನು ಆಯೋಜಿಸಿ, ಎಲ್ಲರ ಅಭಿಪ್ರಾಯ ಪಡೆದು, ಒಂದು ಒಮ್ಮತದ ತೀರ್ಮಾನ ಕೈಗೊಳ್ಳುವ ಸಂಬಂಧ ಮಾತನಾಡುವುದಾಗಿ ಹೇಳಿದ ಅವರು, ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡು ವುದಕ್ಕೆ ಅವಕಾಶವಿಲ್ಲ. ಜನರ ಹಿತರಕ್ಷಣೆಗೆ ಹೋರಾಟ ಮಾಡಬೇಕು ಎಂದು ಹೇಳಿದರು.

 

ನಗರಸಭೆ ಸದಸ್ಯ ಹಾಗೂ ಛೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಶಂಕರ್ ಖಟಾವ್ಕರ್ ಮಾತನಾಡಿ, ವ್ಯಾಪಾರಸ್ಥರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಧಿಕಾರಿಗಳು ದಿಕ್ಕು ತಪ್ಪಿಸುವುದಕ್ಕಾಗಿ ಮುಂದಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಮುಂದೆ ಜಿಲ್ಲಾಧಿಕಾರಿ ಮತ್ತು ಶಾಸಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಂಡು ಹೋಗಲು ಮುಂದಾಗಬೇಕು ಎಂದು ಹೇಳಿದರು.

ಮಹಾಂತೇಶ್ ಭಂಡಾರಿ ಮಾತನಾಡಿ, ಕೇವಲ ನಗರದಲ್ಲಿ ಮಾತ್ರ ವ್ಯಾಪಾರ ವಹಿವಾಟು ಬಂದ್ ಮಾಡಲು ಮುಂದಾದರೆ, ನಗರದ ಜನರು ದಾವಣಗೆರೆಗೆ ಹೋಗಿ ವ್ಯಾಪಾರ ಮಾಡಿಕೊಂಡು ಬರುತ್ತಾರೆ. ಇದರಿಂದಾಗಿ ಇಲ್ಲಿ ನಾವು ಬಾಡಿಗೆ ಕಟ್ಟಿ ಜೀವನ ನಡೆಸಲು ಕಷ್ಟವಾಗುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಒಂದೇ ಸಮಯದಲ್ಲಿ ಅಂಗಡಿ ಬಂದ್ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳುವಂತೆ ಶಾಸಕರು ಗಮನ ಸೆಳೆಯಬೇಕು ಎಂದರು.

ಹೆಚ್.ಕೆ.ಕೊಟ್ರಪ್ಪ ಮಾತನಾಡಿ, ಸರ್ವ ಪಕ್ಷಗಳ ಮುಖಂಡರ ಸಭೆಯನ್ನು ಆದಷ್ಟು ಬೇಗ ಏರ್ಪಡಿಸಿ, ವ್ಯಾಪಾರಸ್ಥರಲ್ಲಿ ಇರುವ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಹೇಳಿದರು.

ಹಣ್ಣಿನ ವ್ಯಾಪಾರಿ ಮಾತನಾಡಿ, ನಗರದಲ್ಲಿ ಕೊರೊನಾ ರೋಗದ ಪ್ರಕರಣಗಳು ಕಡಿಮೆ ಮಾಡಬೇಕಾದರೆ, ಇನ್ನೂ ಒಂದು ವಾರ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವುದು ಸೂಕ್ತ ಎಂದರು.

ವೈ. ರಘುಪತಿ ಮಾತನಾಡಿ, ಮಾಜಿ ಶಾಸಕ ಬಿ.ಪಿ.ಹರೀಶ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಸಕ ಎಸ್.ರಾಮಪ್ಪನವರಿಗೆ ಅವಮಾನ ಮಾಡುವ ಕೆಲಸಕ್ಕೆ ಕೈ ಹಾಕಿರುವುದು ಸರಿಯಾದ ಕ್ರಮವಲ್ಲ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಜಿ.ಸಿದ್ದೇಶ್, ಎಸ್.ಎಂ.ವಸಂತ್, ರತ್ನಮ್ಮ, ಮೆಹಬೂಬ್ ಬಾಷಾ, ಮುಖಂಡರಾದ ಕುರುಬ ಸಮಾಜದ ಅಧ್ಯಕ್ಷ ಕೆ.ಜಡಿಯಪ್ಪ, ಹಲಸಬಾಳು ಬಸವರಾಜಪ್ಪ, ಎಲ್.ಬಿ.ಹನುಮಂತಪ್ಪ, ಬೊಂಗಾಳೆ ರಾಘವೇಂದ್ರ, ಬೊಂಗಾಳೆ ಅರುಣ್‌ ಕುಮಾರ್, ದಾದಾಪೀರ್, ಮರಿದೇವ್, ಸಿದ್ದಪ್ಪ, ಭೀಮಪ್ಪ, ಮಂಜುಳಾ, ಮಹಮ್ಮದ್ ಫೈರೋಜ್, ಪರಶುರಾಮ್ ಕಾಟ್ವೆ ಮತ್ತಿತರರು ಹಾಜರಿದ್ದರು.

error: Content is protected !!