ಹರಪನಹಳ್ಳಿಯಲ್ಲಿ ರೈತರಿಂದ ಪ್ರತಿಭಟನೆ
ಹರಪನಹಳ್ಳಿ, ಜು.1- ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಇಡೀ ದೇಶದ ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಅಗತ್ಯವಿರುವ ಹಲವು ಕಾನೂನು ತಿದ್ದುಪಡಿಗಳನ್ನು ಮಾಡುವ ಮೂಲಕ ಜನರನ್ನು ದಿವಾಳಿ ಮಾಡಲು ಹೊರಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿದರು.
ತಾಲ್ಲೂಕಿನ ಕುಂಚೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಧರಣಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತ ವಿರೋಧಿ ನೀತಿಯ 4 ಮರಣ ಶಾಸನಗಳನ್ನು ಜಾರಿಗೆ ತರುವ ಮೂಲಕ ಅಧಾನಿ, ಅಂಬಾನಿಯಂತಹ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ದೇಶವನ್ನೇ ಒತ್ತೆ ಇಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ.
ದೇಶದ 80 ಲಕ್ಷದಷ್ಟು ರೈತರು ಕೃಷಿ ನೀರಾವರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಪ್ರತಿ ಯುನಿಟ್ ಕರೆಂಟನ್ನು ದುಬಾರಿ ಮಾಡಿ, ಈ ಮಾರಕ ಕಾಯ್ದೆಗಳಿಂದ ರೈತರ ಬದುಕು ದುಸ್ತರವಾಗುತ್ತಿದ್ದು, ಅದರಿಂದ ಬೀಜ ಕಾಯ್ದೆ, ಬೀಜೋತ್ಪಾದನೆ, ಗುತ್ತಿಗೆ ಬೇಸಾಯ, ವಿದ್ಯುತ್ ಖಾಸಗೀಕರಣ ಮಾಡಿದರೆ ಹಂತ ಹಂತವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಅರಸನಾಳು ಸಿದ್ದಪ್ಪ, ರಾಜ್ಯ ರೈತ ಸಂಘದ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ದೇವರಮನಿ ಮಹೇಶ್, ರೈತ ಸಂಘಟನೆಯ ಕೈದಾಳೆ ಮಂಜುನಾಥ್, ರಾಜ್ಯ ರೈತ ಸಂಘದ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ ಮಾತನಾಡಿದರು.
ರಾಜ್ಯ ರೈತ ಸಂಘದ ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳಿಂದ ಕುಂಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.
ಧರಣಿಯಲ್ಲಿ ಐರಣಿ ಚಂದ್ರು, ಪರಶುರಾಮ್ ಮರಿಯಮ್ಮನಹಳ್ಳಿ, ಜಿ.ಶಿವಕುಮಾರ್ ಅರಸನಾಳು, ಎಸ್.ಎಂ. ಮಹೇಶ್ ರೆಡ್ಡಿ, ಮಹಿಳಾ ಸಂಘಟನೆಯ ಶೃತಿ ಸೇರಿದಂತೆ ಇತರರು ಇದ್ದರು.