ಮಲೇಬೆನ್ನೂರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ಹೊಳೆಸಿರಿಗೆರೆ, ಭಾನುವಳ್ಳಿಯಲ್ಲಿ ವಿಶೇಷ ಕೊಠಡಿ ಬಳಕೆ

ಮಲೇಬೆನ್ನೂರು, ಜೂ.25- ಪಟ್ಟಣದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ಪರೀಕ್ಷೆಯಲ್ಲಿ ನೋಂದಾಯಿತ 454 ವಿದ್ಯಾರ್ಥಿಗಳ ಪೈಕಿ 440 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 14 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಅವರು ವಲಸೆ ವಿದ್ಯಾರ್ಥಿಗಳಾಗಿ ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದಿರಬಹುದೆಂದು ಹೇಳಲಾಗಿದೆ.

ಆರೋಗ್ಯ ತಪಾಸಣೆ : ಪರೀಕ್ಷೆ ಆರಂಭಕ್ಕೂ ಮೊದಲು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ಯಾನರ್ ಮೂಲಕ ಎಲ್ಲಾ ವಿದ್ಯಾರ್ಥಿಗಳ ಜ್ವರ ಟೆಸ್ಟ್ ಮಾಡಿದರು. ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಸುಸುತ್ರವಾಗಿ ಪರೀಕ್ಷೆ ಬರೆದರೆಂದು ಕೇಂದ್ರದ ಉಪಮುಖ್ಯ ಅಧೀಕ್ಷಕ ಸಿ.ಜಯ್ಯಣ್ಣ ತಿಳಿಸಿದರು.

ಬೆಳಿಗ್ಗೆಯೇ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ನೇತೃತ್ವದಲ್ಲಿ ಪೌರ ಕಾರ್ಮಿಕರು ಪರೀಕ್ಷಾ ಕೇಂದ್ರದ ಸುತ್ತ ಸ್ವಚ್ಛ ಮಾಡಿ, ಬ್ಲೀಚಿಂಗ್ ಪೌಡರ್ ಹಾಕಿದ್ದರು.

ಅಧಿಕಾರಿ ಭೇಟಿ : ಪರೀಕ್ಷೆಯ ತಾಲ್ಲೂಕು ನೋಡಲ್ ಅಧಿಕಾರಿ ಬಿಇಓ ಬಸವರಾಜಪ್ಪ ಅವರು ಭೇಟಿ ನೀಡಿ, ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಿದರು.

ಹೊಳೆಸಿರಿಗೆರೆ : ಮೂವರು ವಿದ್ಯಾರ್ಥಿಗಳಿಗೆ ಜ್ವರ, ಸೀತ, ಕೆಮ್ಮು ಲಕ್ಷಣ ಕಂಡು ಬಂದ ಕಾರಣ, ಅವರ ಆರೋಗ್ಯ ತಪಾಸಣೆ ಮಾಡಿ, ಮಾತ್ರೆ ನೀಡಿ, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸ ಲಾಯಿತೆಂದು ವೈದ್ಯಾಧಿಕಾರಿ ಡಾ. ರೇಖಾ ತಿಳಿಸಿದರು.

ಈ ಪರೀಕ್ಷಾ ಕೇಂದ್ರದಲ್ಲಿ 283 ವಿದ್ಯಾರ್ಥಿಗಳ ಪೈಕಿ 279 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ನಂದಿಗುಡಿ : ನೋಂದಾಯಿತ 294 ವಿದ್ಯಾರ್ಥಿಗಳ ಪೈಕಿ 279 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಉಳಿದ 15 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇವರು ವಲಸೆ ವಿದ್ಯಾರ್ಥಿಗಳಾಗಿ ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಎನ್.ಮುಕ್ತಾ ತಿಳಿಸಿದರು.

ಭಾನುವಳ್ಳಿ : 339 ವಿದ್ಯಾರ್ಥಿಗಳ ಪೈಕಿ 314 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 17 ವಿದ್ಯಾರ್ಥಿಗಳು ವಲಸೆ ಹೋಗಿರಬಹುದೆಂದು ಹೇಳಲಾಗಿದೆ. 8 ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದ ಕಾರಣ, ಪರೀಕ್ಷಾ ಪ್ರವೇಶ ಪತ್ರ ಬಂದಿರದ ಕಾರಣ ಗೈರು ಹಾಜರಾಗಿದ್ದರು.

ರಾಜನಹಳ್ಳಿ ಗ್ರಾಮದ ಸೀಲ್‌ಡೌನ್ ಪ್ರದೇಶದ ಇಬ್ಬರು ವಿದ್ಯಾರ್ಥಿಗಳನ್ನು ಕಾಯ್ದಿರಿಸಿದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು. ಇವರಿಗೆ ಹಾಗೂ ಕೊಠಡಿ ಮೇಲ್ವಿಚಾರಕರಿಗೆ ಎನ್-95 ಮಾಸ್ಕ್‌ಗಳನ್ನು ನೀಡಲಾಗಿತ್ತೆಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಹೆಚ್.ಹೂಗಾರ್ ಮಾಹಿತಿ ನೀಡಿದರು.

ದೇವರಬೆಳಕೆರೆ : ನೋಂದಾಯಿತ 361 ವಿದ್ಯಾರ್ಥಿಗಳ ಪೈಕಿ 353 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 8 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರೆಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಕೆ.ಜಿ.ಬಸವನಗೌಡ ತಿಳಿಸಿದರು.

error: Content is protected !!