ಜನಾಂಗೀಯವಾದ ವಿರುದ್ಧದ ಅಮೇರಿಕನ್‍ರ ಹೋರಾಟ ಬೆಂಬಲಿಸಿ ಕಾರ್ಮಿಕರ ಪ್ರತಿಭಟನೆ

ದಾವಣಗೆರೆ, ಜೂ.24- ಅಮೇರಿಕಾದಲ್ಲಿ ಜನಾಂಗೀಯ ನಿಂದನೆ ಹಾಗೂ ಜಾರ್ಜ್ ಪ್ಲಾಯ್ಡ್ ಕೊಲೆ ಮತ್ತು ಜನಾಂಗೀಯವಾದ ವಿರುದ್ದ ಅಮೇರಿಕನ್‍ರ ಹೋರಾಟ ಬೆಂಬಲಿಸಿ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಕಾರ್ಮಿಕ ಸಂಘಟನೆಗಳು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಇಂದು ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ, ಇತ್ತೀಚೆಗೆ ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್-ಅಮೆರಿಕನ್ ಯುವಕನನ್ನು ಪೊಲೀಸರು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದರು. ಕಪ್ಪು ಜನಾಂಗಕ್ಕೆ ಸೇರಿದ್ದಾನೆಂಬ ಕಾರಣಕ್ಕೆ ಅವನನ್ನು ಅಮಾನುಷವಾಗಿ ಕೊಲ್ಲಲಾಯಿತು. ಅಮೇರಿಕಾದ ರಾಷ್ಟ್ರಾಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಜನಾಂಗೀಯವಾದಕ್ಕೆ ರಾಜ್ಯ ಯಂತ್ರವನ್ನು ಬಳಸಿಕೊಂಡು ಪುಷ್ಟಿ ನೀಡಲಾಗಿದೆ. ಇದರ ವಿರುದ್ಧ ಅಮೆರಿಕ ಇಂದು ಬೃಹತ್ ಜನ ಹೋರಾಟಕ್ಕೆ ಸಾಕ್ಷಿಯಾಗಿದೆ. ಅಮೇರಿಕಾದ ಹೋರಾಟವನ್ನು ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಾಗತಿಕ ಒಕ್ಕೂಟ ಜಗತ್ತಿನಾದ್ಯಂತ ಜುಲೈ 2ಕ್ಕೆ ಪ್ರತಿಭಟನೆ ನಡೆಸಲಾಗುವುದೆಂದರು.

ಎಲ್ಲಾ ದೇಶಗಳಲ್ಲಿಯೂ ಆಳುವ ವರ್ಗವು ನೈಜ ಜನ ಹೋರಾಟಗಳನ್ನು ಹತ್ತಿಕ್ಕಲು ಜನಾಂಗೀಯವಾದ, ಧರ್ಮ, ಭಾಷೆ ಮುಂತಾದ ವಿಭಜನಕಾರಿ ಧೋರಣೆಯನ್ನು ಅನುಸರಿಸುತ್ತದೆ. ಇಂತಹ ವಿಭಜಕ ಧೋರಣೆಗಳಿಗೆ ವಿರುದ್ಧವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಜನ ಹೋರಾಟಗಳು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಮೇರಿಕನ್ ಜನರ ಹೋರಾಟದೊಂದಿಗೆ, ಎಲ್ಲಾ ದುಡಿಯುವ ಜನರು ಮತ್ತು ಪ್ರಗತಿಪರರು ಧ್ವನಿಗೂಡಿಸಬೇಕಿದೆ ಎಂದರು. 

ಪ್ರತಿಭಟನೆಯಲ್ಲಿ ಕೆ.ಎಚ್. ಆನಂದರಾಜು, ಮಂಜುನಾಥ ಕೈದಾಳೆ, ಆವರಗೆರೆ ಚಂದ್ರು, ತಿಪ್ಪೇಸ್ವಾಮಿ ಅಣಬೇರು, ಮಹಾಂತೇಶ್, ಗುಡ್ಡಪ್ಪ, ಶ್ರೀನಿವಾಸ್ ಪರಶುರಾಮ್, ಐರಣಿ ಚಂದ್ರು, ಆವರಗೆರೆ ವಾಸು, ಸರೋಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!