ಜಗಳೂರು, ಜೂ.22- ಬರಪೀಡಿತ ಜಗಳೂರು ಕ್ಷೇತ್ರದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿರಿಗೆರೆ ಶ್ರೀಗಳ ಆಶಯದಂತೆ ಸಿಎಂ ಯಡಿಯೂರಪ್ಪ ಅವರು 640 ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿ ನಡೆಯಲು ಅನುಕೂಲ ಕಲ್ಪಿಸಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಹರಿಹರ ತಾಲ್ಲೂಕು ದೀಟೂರು ಗ್ರಾಮದ ಬಳಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ಚಟ್ನಹಳ್ಳಿ ಬಳಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್ವೆಲ್ ಮತ್ತು ಪೈಪ್ಲೈನ್ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ಕೊರೊನಾದಿಂದಾಗಿ ಪೈಪ್ಲೈನ್ ಕಾಮಗಾರಿ ಸ್ವಲ್ಪ ತಡವಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಕೆರೆಗಳಿಗೆ ನೀರು ಬರುವಂತೆ ಮಾಡಲಾಗುವುದು ಎಂದರು.
ಅಪ್ಪರ್ ಭದ್ರಾ ಯೋಜನೆ ಕೂಡ ಎಸ್.ವಿ. ರಾಮಚಂದ್ರ ಅವರ ಕನಸಿನ ಯೋಜನೆ. ಶೀಘ್ರದಲ್ಲಿ ಯಶಸ್ವಿಯಾಗುವುದು. ಸಿರಿಗೆರೆ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಶಂಕುಸ್ಥಾಪನೆ ಹಮ್ಮಿಕೊಳ್ಳ ಲಾಗುವುದು. ಕಳೆದ 5 ವರ್ಷಗಳ ಕಾಲ ಆಡಳಿತ ಮಾಡಿದ ರಾಜಕೀಯ ಪ್ರತಿನಿಧಿಗಳ ನಿರ್ಲಕ್ಷತೆಯಿಂದ ಕಾಮಗಾರಿ ಕುಂಠಿತಗೊಂಡಿದೆ ಎಂದು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಹೆಸರೇಳದೆ ತರಾಟೆಗೆ ತೆಗೆದುಕೊಂಡರು.
ಈ ಕಾಮಗಾರಿಗಳು ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಅತೀ ವೇಗದಲ್ಲಿ ನಡೆಯಲಿವೆ. ಬರದ ನಾಡಾದ ಜಗಳೂರು ನೀರಿನ ನಾಡಾಗುವುದು. ಹರಿಹರದಲ್ಲಿ ಯಾವುದೇ ಅಡಚಣೆ ಬಂದರೂ ಶಾಸಕ ರಾಮಪ್ಪ ಅವರು ನಮಗೆ ಸಹಕರಿಸುತ್ತಾರೆ. ಅವರ ಬೇಡಿಕೆಗೆ ನಾನು ಸ್ಪಂದಿಸಿ ಸರ್ಕಾರದ ಗಮನಕ್ಕೆ ತಂದು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಜಾಕ್ವೆಲ್ನಿಂದ 33 ಕಿ.ಮೀ. ದೂರದ ಚಟ್ನಹಳ್ಳಿ ಗುಡ್ಡಕ್ಕೆ ಹೊಳೆಯಿಂದ 220 ಮೀಟರ್ ಎತ್ತರವಿದ್ದು, 2400 ಹೆಚ್.ಪಿ.ಯ 9 ಮೋಟರ್ಗಳಿಂದ ನೀರು ಸರಬರಾಜು ಆಗಲಿದ್ದು, ಪುನಃ ಗುರುತ್ವಾಕರ್ಷಣೆ ಬಲದಿಂದ ಚಟ್ನಹಳ್ಳಿ ಗುಡ್ಡದಿಂದ ಜಗಳೂರು ವಿಧಾನಸಭಾ ಕ್ಷೇತ್ರದ ಅರಸೀಕೆರೆ ಹೋಬಳಿ ಸೇರಿದಂತೆ 57 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಕೆರೆ ತುಂಬಿಸುವ ಯೋಜನೆಯನ್ನು ಕೆಲವರು ನಾನೇ ಮಾಡಿದ್ದೇನೆ ಎಂದು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬೊಗಳೆ ಬಿಡುವವರಿಗೆ ಬಿಜೆಪಿ ಸರ್ಕಾರ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ತಕ್ಕ ಉತ್ತರ ನೀಡಿದೆ. ಸಂಸದ ಸಿದ್ದೇಶಣ್ಣನವರ ಶಕ್ತಿಯಿಂದ ನೀರಾವರಿ ಕನಸು ನನಸಾಗುವುದು. ಅಭಿವೃದ್ದಿಯೇ ನಮ್ಮ ಗುರಿ. ಸುಳ್ಳು ಮಾತುಗಳಿಗೆ ಕಿವಿಗೊಡದೇ ಶಾಸಕ ಎಸ್.ವಿ. ರಾಮಚಂದ್ರ ಅವರ ಮೇಲೆಯೂ ಹಾಗೂ ಬಿಜೆಪಿ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದು ಮನವಿ ಮಾಡಿದರು.
ಬರದ ನಾಡು ಜಗಳೂರು ಮುಂಗಾರು ಮಳೆ ಕೃಪೆಯಿಂದ ತುಪ್ಪದಹಳ್ಳಿ ಕೆರೆ 4 ಅಡಿ ನೀರು ಭರ್ತಿಯಾಗಿದ್ದು, ನೀರಾವರಿ ಯೋಜನೆಯ ಮುನ್ಸೂಚನೆಯಾಗಿದೆ. ಕಾಮಗಾರಿ ವೇಳೆ ರೈತರ ಜಮೀನಿನಲ್ಲಿ ಪೈಪ್ಲೈನ್ ಹಾದು ಹೋಗುತ್ತದೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಹರಿಹರ ಶಾಸಕ ರಾಮಪ್ಪ ಮಾತನಾಡಿ, ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಅಡ್ಡಿಯಾಗದಂತೆ ನಾನು ಸಹಕಾರ ನೀಡುವೆ. ನನ್ನ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕಗಳು ಬಂದರೆ ನಾನು ನಿಭಾಯಿಸಿ ಸಹಕಾರ ನೀಡುತ್ತೇನೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟೆ, ಮುಖಂಡರಾದ ಚಟ್ನಹಳ್ಳಿ ರಾಜಪ್ಪ, 22 ಕೆರೆಗಳ ಏತ ನೀರಾವರಿ ಹೋರಾಟ ಸಮತಿ ಅಧ್ಯಕ್ಷ ಮಂಜುನಾಥಗೌಡ, ಪದಾಧಿಕಾರಿಗ ಳಾದ ಶಿವಕುಮಾರ್ ತುಪ್ಪದಹಳ್ಳಿ, ಚಂದ್ರನಾಯ್ಕ ಹಾಲೇಕಲ್ಲು ಮತ್ತಿತರರು ಉಪಸ್ಥಿತರಿದ್ದರು.