ಹರಿಹರದಲ್ಲಿ ಕೆಜೆವಿಎಸ್ ಮತ್ತು ವಿವಿಧ ಸಂಘಟನೆಗಳಿಂದ ಉಪಹಾರ ಸೇವಿಸುತ್ತಾ ಗ್ರಹಣ ವೀಕ್ಷಣೆ
ಹರಿಹರ, ಜೂ. 21 – ಇಂದು ನಡೆದ ಕಂಕಣ ಸೂರ್ಯಗ್ರಹಣ ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ಈ ಅಪರೂಪದ ದೃಶ್ಯವನ್ನು ಎಲ್ಲರೂ ವೀಕ್ಷಿಸಿ ಆನಂದಿಸಬೇಕು. ಆದರೆ, ವೀಕ್ಷಿಸುವಾಗ ಸೌರ ಕನ್ನಡಕಗಳನ್ನು ಧರಿಸುವುದು ಕಡ್ಡಾಯ ಎಂದು ಗುತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶ್ರೀಧರ ಮಯ್ಯ ತಿಳಿಸಿದ್ದಾರೆ.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಭಾನುವಾರ ಕೆಜೆವಿಎಸ್ ಹರಿಹರ ಘಟಕ, ಪರಸ್ಪರ ಬಳಗ, ಸಾಹಿತ್ಯ ಸಂಗಮ, ಕ.ಜಾ.ಪ., ಚಿಂತನ ಟಿವಿ ಬಳಗ ಮತ್ತು ನಕ್ಷತ್ರ ಟಿವಿ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಡಿಸಿದ್ದ ಸೂರ್ಯೋತ್ಸವ ಸಂಭ್ರಮ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಚಾಲನೆಕೊಟ್ಟು ಅವರು ಮಾತನಾಡಿದರು.
ಬರೀ ಕಣ್ಣಿನಿಂದ ಸೂರ್ಯಗ್ರಹಣ ನೋಡುವುದು ಸಲ್ಲದು. ಅದರಿಂದ ಅಪಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಗ್ರಹಣ ವೀಕ್ಷಣೆ ಸಮಯದಲ್ಲಿ ಎಚ್ಚರ ವಹಿಸುವುದು ಸೂಕ್ತ ಎಂದರು. ಭೂಮಿ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದರಿಂದ ಸೂರ್ಯನ ಸುತ್ತಲೂ ಬೆಂಕಿಯ ರಿಂಗ್ ಗೋಚರಿಸುತ್ತದೆ. ಮನುಷ್ಯನ ಜೀವನದಲ್ಲಿ ಇಂತಹ ಅಪರೂಪದ ದೃಶ್ಯ ಸಿಗುವುದು ಅಪರೂಪವೇ ಸರಿ ಎಂದು ಹೇಳಿದರು. ಸೂರ್ಯಗ್ರಹಣ ಕಾಲದಲ್ಲಿ ಊಟ, ತಿಂಡಿ ಸೇವಿಸಿದರೆ ನಮ್ಮ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಆದ್ದರಿಂದ ಯಾವುದೇ ಗ್ರಹಣವನ್ನು ಜನರು ಭಯಪಡದೇ ವೀಕ್ಷಿಸಿ ಎಂದರು.
ಕೆಜೆವಿಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ, ಕಂಕಣ ಸೂರ್ಯ ಗ್ರಹಣವನ್ನು ಎಲ್ಲರೂ ನೋಡಿ ಆನಂದಿಸಬೇಕು. ಈ ದಿನ ಮೋಡ ಕವಿದ ವಾತಾವರಣವಿದ್ದು ವೀಕ್ಷಣೆ ಮಾಡಲು ಅಡಚಣೆಯಾಗಿದೆ. ಜನರು ಮೌಢ್ಯದಿಂದ ಹೊರಬಂದು ಜ್ಞಾನವಂತರಾಗಬೇಕು. ಗ್ರಹಣಗಳು ನಮ್ಮ ಪರಿಸರದಲ್ಲಿ ನಡೆಯುವ ನೆರಳು ಬೆಳಕಿನಾಟ ಅಷ್ಟೇ ಎಂದರು.
ಜಾದೂಗಾರ್ ಹರಿ ಮಾತನಾಡಿ, ಜನರು ಮೌಢ್ಯದಿಂದ ಹೊರಬರಬೇಕು. ಕೆಲವು ಜ್ಯೋತಿಷಿಗಳು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಜನರು ಭಯ ಹೊಂದಬಾರದು. ಕೊರೊನಾ ರೋಗ ಯಾರಿಗೆ ಬರುವುದಿಲ್ಲ, ಯಾರಿಗೆ ಬರುತ್ತದೆ ಎಂದು ಜ್ಯೋತಿಷಿಗಳು ಹೇಳಲಿ ನೋಡೋಣ ಎಂದರು. ಯಾವುದೇ ಗ್ರಹಣ ನೋಡುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದೊಂದು ಪ್ರಕೃತಿಯಲ್ಲಿ ನಡೆಯುವ ನೆರಳು, ಬೆಳಕಿನಾಟ ಎಂದು ವಿವರಿಸಿದರು.
ಬಸವರಾಜ್ ಎರೇಸೀಮೆ, ಜಿಗಳಿ ರುದ್ರಗೌಡ, ಎನ್.ಇ.ಸ್ವಾಮಿ, ಹೇಮಂತ, ಮೊಹಿಸಿನ್ ಖಾನ್, ಹೆಚ್.ಕೆ.ಕೊಟ್ರಪ್ಪ, ಮಹಬೂಬ್ ಬಾಷಾ, ಮಲ್ಲಿಕಾರ್ಜುನ ಅಣಜಿಮಠ, ಎ.ಕೆ.ಭೂಮೇಶ್, ಬಸವರಾಜ್, ವಿ.ಬಿ.ಕೊಟ್ರೇಶ್, ಮಲ್ಲಿಕಾರ್ಜುನ ಅಂಗಡಿ, ರಿಯಾಜ್ ಅಹಮದ್, ಸುಬ್ರಹ್ಮಣ್ಯ ನಾಡಿಗೇರ್, ಕೃಷ್ಣ ರಾಜೋಳಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.