ಹರಿಹರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಕೆ
ಹರಿಹರ, ಮೇ 30- ಕೊರೊನಾ ವೈರಸ್ ವಿರುದ್ಧ ಫ್ರಂಟ್ ಲೈನ್ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ವಿಶೇಷ ಪ್ಯಾಕೇಜ್ ಹಾಗೂ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರಿಗೆ ಅರ್ಪಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್)ದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಮಂತ್ರಿ ಬಿ. ಶ್ರೀರಾಮುಲುರವರಿಗೆ ತಹಶೀಲ್ದಾರ್ ಮುಖಾಂತರ ತಮ್ಮ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಮಾರ್ಚ್ ತಿಂಗಳಿನಿಂದ ಕೋವಿಡ್-19 ಕಾರ್ಯ ನಿಯೋಜನೆ ಮುಗಿಯುವವರೆಗೆ ನಮ್ಮನ್ನು ಯಾವುದೇ ವಿಶ್ರಾಂತಿಯಿಲ್ಲದೆ ಇಲ್ಲಿಯತನಕ ದುಡಿಸಿಕೊಳ್ಳಲಾಗು ತ್ತಿದೆ. ಆದರೆ ಇದು ಇನ್ನೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಆದ್ದರಿಂದ ಮಾರ್ಚ್ ತಿಂಗಳಿನಿಂದ ಆಶಾ ಕಾರ್ಯಕರ್ತೆಯರಾದ ನಮಗೆ ಪ್ರತಿ ತಿಂಗಳು ರೂ.10 ಸಾವಿರಗಳ ವಿಶೇಷ ಪ್ಯಾಕೇಜ್ ಘೋಷಣೆ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸುರಕ್ಷಾ ಸಾಮಗ್ರಿಗಳು ಮತ್ತು ಆಕಸ್ಮಿಕ ಮರಣ ಹೊಂದಿದರೆ ಕೇಂದ್ರ ಸರ್ಕಾರ ಘೋಷಿಸಿರುವ 50 ಲಕ್ಷ ರೂ.ಗಳ ವಿಮೆ ಯೋಜನೆ ಯಲ್ಲಿ ನಮ್ಮನ್ನೂ ಸೇರ್ಪಡೆ ಮಾಡಿಕೊಳ್ಳತಕ್ಕದ್ದು.
ನಾವು ಸರ್ವೇ ನಡೆಸುವ ಸಂದರ್ಭದಲ್ಲಿ ನಮ್ಮ ಮೇಲೆ ಆಗುವ ಹಲ್ಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಬಗ್ಗೆಯೂ ಸಹ ಸರ್ಕಾರ ನಮಗೆ ರಕ್ಷಣೆ ನೀಡಬೇಕಾಗಿದೆ. ನಾವುಗಳು ರೋಗ ಹರಡುವ ಆತಂಕ, ಒತ್ತಡ ಮತ್ತು ಹತಾಶೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇದನ್ನು ಗಮನಿಸಿ ಸರ್ಕಾರವು ನಮ್ಮ ಮನವಿಯನ್ನು ಪುರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಅರ್ಪಿಸುವ ಸಮಯದಲ್ಲಿ ಆಶಾ ಕಾರ್ಯಕರ್ತೆಯರಾದ ಆರ್.ವೇದಾವತಿ, ರೇಣುಕಾ, ಶಾಂತವಿ, ಬಿ.ಎಂ.ಜ್ಯೋತಿ, ಶೋಭಾ ಅಲ್ಲದೆ ಅನೇಕ ಆಶಾ ಕಾರ್ಯಕರ್ತೆಯರು ಹಾಜರಿದ್ದರು.