ನೀರಿನ ಕಂದಾಯ ವಸೂಲಿಗಿಳಿದ ಪಾಲಿಕೆ

ನೀರಿನ ಕಂದಾಯ ಉಳಿಸಿಕೊಂಡಿದ್ದ ವಿದ್ಯಾರ್ಥಿ ಭವನದ ವೃತ್ತದಲ್ಲಿರುವ ಭರಣಿ ಹೋಟೆಲ್‌ ಮಾಲೀಕರಿಂದ 56 ಸಾವಿರ ರೂ. ನೀರಿನ ಕರ ವಸೂಲಿ ಮಾಡಲಾಯಿತು.

ಹೆಚ್ಚು ಕಂದಾಯ ಬಾಕಿ ಉಳಿಸಿಕೊಂಡಿದ್ದ ಹೋಟೆಲ್, ಲಾಡ್ಜ್‍ ಮೇಲೆ ದಾಳಿ :

ಸ್ಥಳದಲ್ಲಿಯೇ ನಗದು ಹಾಗೂ ಚೆಕ್ ರೂಪದಲ್ಲಿ ನೀರಿನ ಕಂದಾಯ ಪಾವತಿಸಿದ ಮಾಲೀಕರು

ದಾವಣಗೆರೆ, ಮಾ.1- ನಗರದಲ್ಲಿಂದು ಸಂಜೆ ಕಂದಾಯ ವಸೂಲಿ ಕಾರ್ಯಾಚರಣೆ ನಡೆಸಿದ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ನೇತೃತ್ವದ ತಂಡವು ನೀರಿನ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದ ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಹೋಟೆಲ್, ಲಾಡ್ಜ್‍ಗಳಿಂದ ನೀರಿನ ಕಂದಾಯ ವಸೂಲಿ ಮಾಡಿತು.

ವಿದ್ಯಾರ್ಥಿ ಭವನ ವೃತ್ತದಲ್ಲಿರುವ ಮಥುರ ಲಾಡ್ಜ್, ಭರಣಿ ಹೋಟೆಲ್, ಹೋಟೆಲ್ ನ್ಯೂ ಸಿಟಿ ಮತ್ತು ಗಾಂಧಿ ವೃತ್ತದಲ್ಲಿನ ಶರಭೇಶ್ವರ ಹೋಟೆೆಲ್‍ಗಳ ಮೇಲೆ ದಿಢೀರ್ ದಾಳಿ ನಡೆಸಿ, ಸ್ಥಳದಲ್ಲೇ ಕರ ವಸೂಲಿ ಮಾಡಲಾಯಿತು.

ಹೋಟೆಲ್ ಗಳು ಬಂದ್: ಮಥುರ ಲಾಡ್ಜ್‍ನವರದ್ದು ಕಂದಾಯ 19.76 ಲಕ್ಷ ರೂ. ಹಾಗೂ 88 ಸಾವಿರ ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯುಜಿಡಿ ವ್ಯವಸ್ಥೆ ಸ್ಥಗಿತಗೊಳಿಸಿ, ನೀರಿನ ವ್ಯವಸ್ಥೆ ಕಡಿತಗೊಳಿಸಿದರು. ಅಷ್ಟೇ ಅಲ್ಲದೆ ಹೋಟೆಲ್ ಬಂದ್ ಮಾಡಿಸಿ ಸೀಜ್ ಮಾಡಲಾಯಿತು.

ಅಂತೆಯೇ ನ್ಯೂ ಸಿಟಿ ಹೋಟೆಲ್ ನವರು 88,560 ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದರಲ್ಲದೇ ಟ್ರೇಡ್ ಲೈಸನ್ಸ್ ನವೀಕರಣ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಯುಜಿಡಿ ವ್ಯವಸ್ಥೆ, ನೀರು ಸರಬರಾಜನ್ನು ಬಂದ್ ಮಾಡಿಸುವುದರ ಜೊತೆಗೆ ಹೋಟೆಲ್‍ಗೆ ಬೀಗ ಹಾಕಿ ಸೀಜ್ ಮಾಡಲಾಯಿತು.

ಸ್ಥಳದಲ್ಲೇ ಪಾವತಿ: ಭರಣಿ ಹೋಟೆಲ್ ನಿಂದ 56,880 ರೂ. ನೀರಿನ ಕಂದಾಯ ಬಾಕಿ ಉಳಿಸಿಕೊಳ್ಳಲಾಗಿತ್ತು.  ಬಾಕಿ ಪಾವತಿಗೆ ಸೂಚನೆ ನೀಡಿದಾಗ ಹೋಟೆಲ್ ಮಾಲೀಕರು ಸ್ಥಳದಲ್ಲೇ ಬಾಕಿ ಹಣವನ್ನು ಪಾವತಿಸಿದರು.

ಇನ್ನೂ ಶರಭೇಶ್ವರ ಹೋಟೆಲ್ ನಿಂದ 79 ಸಾವಿರ ರೂ. ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದ ಕಾರಣ ಬಾಕಿ ಪಾವತಿಗೆ ಸೂಚಿಸಿದಾಗ ಸ್ಥಳದಲ್ಲೇ ಬಾಕಿ ಹಣದ ಚೆಕ್ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಕಚೇರಿ ವ್ಯವಸ್ಥಾಪಕ ಪಿ. ವೆಂಕಟೇಶ್, ಕಂದಾಯಾಧಿಕಾರಿ ಕೆ. ನಾಗರಾಜ್, ಆರೋಗ್ಯಾಧಿಕಾರಿ ಮಲ್ಲಿಕಾ, ರಾಘವೇಂದ್ರ, ಕಂದಾಯ ನಿರೀಕ್ಷಕರಾದ ಹನುಮಂತಪ್ಪ, ಮೌಸೀನ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಸೇರಿದಂತೆ ಇತರರು ಇದ್ದರು.

error: Content is protected !!