ಕಸಾಪದಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದಲ್ಲಿ ಡಿ.ಲಕ್ಷ್ಮೀದೇವಿ
ಹರಿಹರ, ಫೆ.27- ವಿದ್ಯಾರ್ಥಿಗಳು ಮೊಬೈಲ್ ಹಾವಳಿಗೆ ಬಲಿಯಾಗದೆ ಪಾಠಗಳನ್ನು ಆಸಕ್ತಿಯಿಂದ ಕಲಿತರೆ ವಿದ್ಯಾರ್ಥಿ ಜೀವನ ಸಾರ್ಥಕವಾಗುವುದು. ಡಿವಿಜಿ ಮತ್ತು ಕುವೆಂಪು ಅವರ ಬದುಕು ನಿಮಗೆಲ್ಲಾ ಪ್ರೇರಣೆಯಾಗಲಿ ಎಂದು ಕರೆಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡಿ.ಲಕ್ಷ್ಮಿದೇವಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ ಮತ್ತು ಕುವೆಂಪುರವರ ಸಾಹಿತ್ಯ ವಿಚಾರಧಾರೆ ಕುರಿತು ಮಾತನಾಡಿದರು.
ಡಿವಿಜಿಯವರ ಬದುಕು, ಬರಹ ಬಹಳ ಮುಖ್ಯವಾದುದು. ವಿದ್ಯಾರ್ಥಿಗಳಿಗಂತೂ ಅವರ ಜೀವನ ಮಾದರಿಯಾಗಿದೆ ಎಂದರು.
ಡಿವಿಜಿಯವರು ಪತ್ರಕರ್ತರಾಗಿ ಸೇವೆ ಸಲ್ಲಿಸಿ ಪತ್ರಿಕಾ ರಂಗದಲ್ಲಿಯೂ ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ಮಾದರಿಯಾಗಿದ್ದಾರೆ. ಅವರು ಆರ್ಥಿಕ ಸ್ಥಿತಿವಂತರಲ್ಲದಿದ್ದರೂ ಮಾನ ಮತ್ತು ಸನ್ಮಾನಕ್ಕೆ ಆಸೆ ಪಟ್ಟವರಲ್ಲ. ಪತ್ರಿಕಾರಂಗದಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿ ಪ್ರಶಂಸೆಗೆ ಒಳಗಾಗಿದ್ದಾರೆ. ಮಂಕುತಿಮ್ಮನ ಕಗ್ಗವನ್ನು ಎಲ್ಲರೂ ಓದಬೇಕು. ಅವುಗಳನ್ನು ಓದಿ ಅರ್ಥೈಸಿಕೊಂಡು ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಂಡರೆ, ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುವುದು ಎಂದರು.
ಡಿವಿಜಿಯವರ ಮಂಕುತಿಮ್ಮನ ಕಗ್ಗದ ಅನೇಕ ಪದ್ಯಗಳನ್ನು ಮತ್ತು ಕುವೆಂಪು ರಚಿತ ಗೀತೆಗಳನ್ನು ರಾಗವಾಗಿ ಹಾಡಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಸಿ.ತಹಸೀಲ್ದಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ದತ್ತಿ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನೇಕ ವಿಷಯಗಳು ತಿಳಿಯುತ್ತವೆ ಎಂದರು. ಕಸಾಪದವರು ನಮ್ಮ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಏರ್ಪಡಿಸಿ ಒಳ್ಳೆಯ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತ ನಾಡಿ, ದತ್ತಿ ದಾನಿಗಳು ಅವರಿಗೆ ಆಸಕ್ತಿಯಿರುವ ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಲು ದತ್ತಿ ಇಟ್ಟಿರುತ್ತಾರೆ. ಅವರ ಅಭಿಲಾಷೆಯಂತೆ ನಾವು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶಾಲಾ- ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಏರ್ಪಡಿಸಿ ದತ್ತಿದಾನಿಗಳ ಆಸೆಯನ್ನು ಈಡೇರಿಸು ತ್ತೇವೆ ಎಂದು ದತ್ತಿದಾನಿಗಳನ್ನು ನೆನೆದರು.
ಕಸಾಪ ಗೌರವ ಕಾರ್ಯದರ್ಶಿ ಎ.ಡಿ.ಕೊಟ್ರಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಇಂದು ನಡೆಯುತ್ತಿರುವ ದತ್ತಿ ಉಪನ್ಯಾಸ, ಮಾಯಸಂದ್ರ ರಾಮಸ್ವಾಮಿ ಕುಟುಂಬ ವರ್ಗ, ಶೀಲಾವತಿ ರಾಮಕೃಷ್ಣಮೂರ್ತಿ ಮತ್ತು ಲಲಿತಮ್ಮ ಡಾ.ಚಂದ್ರಶೇಖರ್ ಅವರ ಅಭಿಲಾಷೆಯಂತೆ ಡಿವಿಜಿಯವರ ಮಂಕುತಿಮ್ಮನ ಕಗ್ಗ ಹಾಗೂ ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ವಿಚಾರಧಾರೆ ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಜಿ.ಎಸ್.ಸುರೇಶ್, ಉಪನ್ಯಾಸಕ ರಾಘವೇಂದ್ರ, ನಾಗರ ತ್ನಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಭಾಷಣ ಕಲೆಯಲ್ಲಿ ನಿಪುಣೆಯಾದ ಧರಾಮ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾವೇರಿ ಇವಳನ್ನು ಪುರಸ್ಕರಿಸಲಾಯಿತು.
ಸಹಾಯಕ ಪ್ರಾಧ್ಯಾಪಕ ಡಾ. ಎಂ.ಕುಮಾರ್ ಸ್ವಾಗತಿಸಿದರು. ದೀಪಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪೂಜಾ ಮತ್ತು ಮೇಘಾ ಕಾರ್ಯಕ್ರಮ ನಿರೂಪಿಸಿದರು.