ಹರಪನಹಳ್ಳಿ ಫೆ.27 – ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ವಸತಿ ಶಾಲೆಗಳು ಸೇರಿದಂತೆ ಎಸ್ಸಿ-ಎಸ್ಟಿ, ಹಿಂದುಳಿದ ಮೆಟ್ರಿಕ್ ಪೂರ್ವ ಹೆಣ್ಣು-ಗಂಡು ಮಕ್ಕಳ ಹಾಸ್ಟೆಲ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದರು.
ಕಾರ್ಮಿಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ತಾಲ್ಲೂಕು ಕೇಂದ್ರದ ಅರ್ಹತೆಯನ್ನು ಹೊಂದಿರುವ ಅರಸೀಕೆರೆ ಹೋಬಳಿ ಹರಪನಹಳ್ಳಿ ತಾಲ್ಲೂಕಿನ ಅತೀ ದೊಡ್ಡ ಹೋಬಳಿ ಕೇಂದ್ರ ವಾಗಿದೆ. 1.5 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನಸಂಖ್ಯೆಯನ್ನು ಹೊಂದಿದ್ದರೂ ಸಮರ್ಪಕ ಶಾಲಾ-ಕಾಲೇಜು, ಹಾಸ್ಟೆಲ್ ವ್ಯವಸ್ಥೆ ಇಲ್ಲದೆ ಸಾವಿರಾರು ಮಕ್ಕಳು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ, ಹೋಬಳಿ ವ್ಯಾಪ್ತಿಯಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಸೇರಿದಂತೆ ಹೆಣ್ಣು, ಗಂಡು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘಟನೆ ಮುಖಂಡ ಕಬ್ಬಳ್ಳಿ ಮೈಲಪ್ಪ ಮಾತನಾಡಿ, ಹೋಬಳಿ ವ್ಯಾಪ್ತಿಯಲ್ಲಿ ಕೇವಲ ಒಂದು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಹೊರತು ಪಡಿಸಿ ಹಾಸ್ಟೆಲ್ ಇಲ್ಲ. ದೂರದ ಊರುಗಳಿಂದ ಬರುವ ವಿದ್ಯಾರ್ಥಿನಿ ಯರಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಸಂಖ್ಯೆ ಕುಸಿದಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎನ್ನುವ ಸರ್ಕಾರದ ನೀತಿಗಳು ವಿಫಲವಾಗಿದೆ ಎಂದು ದೂರಿದರು.
ಅರಸೀಕೆರೆ ಗ್ರಾಮದ ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರಕಾರ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು. ಗ್ರಾಮದ ಬಸ್ ನಿಲ್ದಾಣದಲ್ಲಿ ಸೇರಿದ ವಿದ್ಯಾರ್ಥಿಗಳ ಸಂಘಟನೆಗಳು ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿ ಹಾಸ್ಟೆಲ್ ನಿರ್ಮಾಣಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಐಎಸ್ಎಫ್ ರಾಜ್ಯ ಜಂಟಿ ಕಾರ್ಯದರ್ಶಿ ಬೆಳಗನೂರು ಕೊಟ್ರೇಶ್, ಕಬ್ಬಳ್ಳಿ ಬಸವರಾಜ, ಮಾದಿಹಳ್ಳಿ ಮಂಜಪ್ಪ, ಚಂದ್ರನಾಯ್ಕ, ರಮೇಶ್ ನಾಯ್ಕ, ದೊಡ್ಡ ಬಸಪ್ಪ, ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು.