ಹತ್ತಕ್ಕೂ ಹೆಚ್ಚು ಕುಟುಂಬಗಳ ರಕ್ಷಣೆ
ದಾವಣಗೆರೆ, ಜು.19- ಗೃಹ ಬಳಕೆಯ ಅಂಗಡಿಯೊಂದರಲ್ಲಿ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಆತಂಕ ಸೃಷ್ಟಿಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.
ಅವಘಡದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಮನೆಗಳಲ್ಲಿನ ಜನರ ಪ್ರಾಣ ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಚಾಮರಾಜಪೇಟೆ ಬಳಿಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಹಳೆ ಹೆರಿಗೆ ಆಸ್ಪತ್ರೆ) ಎದುರಿನ ಕೆ.ಕೆ. ಅಸೋಸಿಯೇಟ್ಸ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಫ್ಯಾನ್, ಮಿಕ್ಸಿ ಸೇರಿದಂತೆ ಗೃಹ ಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮಾ ನೇತೃತ್ವದ ಸಿಬ್ಬಂದಿಗಳ ತಂಡವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಇದೇ ಕಟ್ಟಡದ ಮೇಲಿನ ಮಹಡಿಗಳಲ್ಲಿ ಸುಮಾರು 10 ಕುಟುಂಬಗಳು ವಾಸವಾಗಿದ್ದವು. ಎಲ್ಲರನ್ನೂ ಅಗ್ನಿಶಾಮಕ ದಳದ ಸಿಬ್ಬಂದಿ ಸಮಯ ಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ.