ಮಲೇಬೆನ್ನೂರಿನಲ್ಲಿ ವಾರದ ಕರ್ಫ್ಯೂ ಯಶಸ್ವಿ

ಮಲೇಬೆನ್ನೂರು, ಏ.24-  ಮಹಾಮಾರಿ ಕೊರೊನಾ 2ನೇ ಅಲೆಯನ್ನು ನಿಯಂತ್ರಿಸುವು ದಕ್ಕಾಗಿ ರಾಜ್ಯ ಸರ್ಕಾರ ಆದೇಶ ಮಾಡಿದ್ದ ವೀಕೆಂಡ್ ಕರ್ಫ್ಯೂಗೆ ಮಲೇಬೆನ್ನೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ಬೆಳಿಗ್ಗೆ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳು ತೆರೆದಿದ್ದವು. ಅಷ್ಟರೊಳಗೆ ಜನರು ತಮಗೆ ಬೇಕಾದ ತರಕಾರಿ, ಕಿರಾಣಿ ಇತ್ಯಾದಿ ಸಾಮಾನುಗಳನ್ನು ಖರೀದಿಸಿದರು. ನಂತರ ಪೊಲೀಸರು ಮೆಡಿಕಲ್ ಷಾಪ್, ಪೆಟ್ರೋಲ್ ಬಂಕ್‌ಗಳನ್ನು ಹೊರತು ಪಡಿಸಿ, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಮಧ್ಯಾಹ್ನ 12 ರ ಹೊತ್ತಿಗೆ ಮಲೇಬೆನ್ನೂರು ಸಂಪೂರ್ಣ ಲಾಕ್‌ಡೌನ್ ಆಗಿತ್ತು.  

ಪಿಎಸ್ಐ ವೀರಬಸಪ್ಪ ಅವರ ನೇತೃತ್ವದಲ್ಲಿ ಪೊಲೀಸರು ಕರ್ಫ್ಯೂವನ್ನು ಬಿಗಿಗೊಳಿಸಿದ್ದರು. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ಮಲೇಬೆನ್ನೂರಿ ನಲ್ಲಿ ಸಕ್ಸಸ್ ಆಯಿತು. ಆದರೆ, ಹಳ್ಳಿಗಳಲ್ಲಿ ಕರ್ಫ್ಯೂ ಎಂದರೆ ಏನು ಎಂದು ಕೇಳುವಂತಿತ್ತು.

ಹಳ್ಳಿಯಲ್ಲಿ ಕರ್ಫ್ಯೂ ಎಫೆಕ್ಟ್ ಅಷ್ಟಾಗಿ ಕಂಡು ಬರಲಿಲ್ಲ. ಜನ ಎಂದಿನಂತೆ ತಮ್ಮ ಹೊಲ -ಮನೆ ಕೆಲಸಗಳಲ್ಲಿದ್ದರು. ಭಾನುವಾರ ಮದುವೆ ಮುಹೂರ್ತ ಇರುವುದರಿಂದ ಶನಿವಾರ ಸಂಜೆ ಹಳ್ಳಿಗಳಲ್ಲಿ ಮದುವೆ ಸಿದ್ದತೆ ನಡೆದಿತ್ತು.

ತಹಶೀಲ್ದಾರ್ ಸಭೆ : ವೀಕೆಂಡ್ ಕರ್ಫ್ಯೂ ನಡುವೆ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು ಪುರಸಭೆಯಲ್ಲಿ ಕೊರೊನಾ ನಿಯಂತ್ರ ಣಕ್ಕಾಗಿ ಅಧಿಕಾರಿಗಳ ಸಭೆ ನಡೆಸಿದರು.

ಕೊರೊನಾ ಪಾಸಿಟಿವ್ ಬಂದಂತಹ ವ್ಯಕ್ತಿಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ, ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಿ, ಪ್ರತಿ ದಿನ ಮಧ್ಯಾಹ್ನ 12 ಗಂಟೆಯ ಒಳಗಾಗಿ ಪುರಸಭೆಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್ ಅವರಿಗೆ ನೀಡುವಂತೆ ತಹಶೀಲ್ದಾರ್ ರಾಮಚಂದ್ರಪ್ಪ ಅವರು ಬಿಎಲ್ಓಗಳಿಗೆ  ತಾಕೀತು ಮಾಡಿದರು.

ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಮಾತ ನಾಡಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಟೆಸ್ಟ್‌ಗಳನ್ನು ಹೆಚ್ಚಿಸ ಲಾಗಿದೆ. ಪಾಸಿಟಿವ್ ವ್ಯಕ್ತಿಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿದರೆ ಕೊರೊನಾ ಸೋಂಕಿನ ಕೊಂಡಿಯನ್ನು ಕಡಿತ ಮಾಡಿದಂತಾಗುತ್ತದೆ. ಕೋವಿಡ್ 2ನೇ ಅಲೆ ಯಲ್ಲಿ ಪಟ್ಟಣದಲ್ಲಿ ಇದುವರೆಗೆ 5 ಜನ ಸೋಂಕಿ ತರು ಮಾತ್ರ ಪತ್ತೆಯಾಗಿದ್ದಾರೆ ಎಂದರು.

ಉಪತಹಶೀಲ್ದಾರ್ ಆರ್.ರವಿ ಮಾತನಾಡಿದರು. ಈ ಬಾರಿ ವಾರ್ಡ್ ರೀತಿ ಅನುಕೂಲ ಮಾಡಿಕೊಡಿ ಎಂದು ಅಂಗನವಾಡಿ ಕಾರ್ಯಕರ್ತರಾದ ಶಬಾನಾ ಬಾನು, ಚಂದ್ರಮ್ಮ ಉಮಾದೇವಿ, ಮಂಜುಳ ಮನವಿ ಮಾಡಿದರು.

ಬಿಎಲ್ಒ ನಿರಂಜನ್, ದಂಡಿ ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ಪ್ರೇಮಲೀಲಾ, ಖಲೀಲ್  ಮಾತನಾಡಿ, ಗುರುತು ಪತ್ರ ಹಾಗೂ ಕಳೆದ ಬಾರಿ ಕೆಲಸ ಮಾಡಿದ ಭತ್ಯೆ ಕೆಲವರಿಗೆ ನೀಡಿಲ್ಲ. ಕಳೆದ ಬಾರಿ ರಜಾ ಕಾಲದಲ್ಲಿ ಕೆಲಸ ಮಾಡಿದ ಸಮಯದ `ಗಳಿಕೆ ರಜಾ’ ಸೌಲಭ್ಯ ನೀಡಲು ಆಗ್ರಹಿಸಿದರು.

ಪುರಸಭೆ ಮುಖ್ಯಾಧಿಕಾರಿ ದಿನಕರ್, ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ಪ್ರಭು, ನವೀನ್, ನಾಡ ಕಚೇರಿಯ ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಮತ್ತಿತರರು ಸಭೆಯಲ್ಲಿದ್ದರು.

33 ಕೇಸ್ : ಇದರ ಮಧ್ಯೆ ಶನಿವಾರ ಹರಿಹರ ತಾಲ್ಲೂಕಿನಲ್ಲಿ ಹಿರಿಯ ಆರೋಗ್ಯ ಸಹಾಯಕ ಎಂ.ಉಮಣ್ಣ ಸೇರಿ 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

error: Content is protected !!