ಹರಪನಹಳ್ಳಿ, ಫೆ.23- ಮಧ್ಯಕರ್ನಾಟಕದ ಐತಿಹಾಸಿಕ ಪ್ರಸಿದ್ಧ ಉಚ್ಚೆಂಗೆಮ್ಮ ದೇವಿ ಸನ್ನಿಧಿಯಲ್ಲಿ ಇದೇ 26ರಿಂದ 27ರವರೆಗೆ ನಡೆಯುವ ಭರತ ಹುಣ್ಣಿಮೆಯಂದು ಗ್ರಾಮಸ್ಥರನ್ನು ಹೊರತು ಪಡಿಸಿ ಹೊರಗಿನ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಶಾಕರೂ ಆದ ಎಸ್.ವಿ. ರಾಮಚಂದ್ರ ಹೇಳಿದರು.
ತಾಲ್ಲೂಕಿನ ಉಚ್ಚಂಗಿ ದುರ್ಗದ ಉಚ್ಚೆಂಗೆಮ್ಮ ದೇವಿ ಯಾತ್ರಾ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭರತ ಹುಣ್ಣಿಮೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕೊರೋನಾ ಸೊಂಕು ನಿಯಂತ್ರಣದಲ್ಲಿದ್ದ ಮಾತ್ರಕ್ಕೆ ಸೊಂಕು ತೊಲಗಿದೆ ಎಂದರ್ಥವಲ್ಲ. ರಾಜ್ಯದ ಕೆಲವೆಡೆ ಸೋಂಕು ಉಲ್ಭಣಗೊಂಡ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐತಿಹಾಸಿ ಕಭರತ ಹುಣ್ಣಿಮೆ ಆಚರಣೆಯನ್ನು ಸ್ಥಳಿಯರಿಗೆ ಮಾತ್ರ ಸಿಮಿತಗೋಳಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮದ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಬೇಕು. ಜನ ಎತ್ತಿನ ಗಾಡಿ ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ವಾಹನಗಳ ಮೂಲಕ ಕ್ಷೇತ್ರಕ್ಕೆ ಬಾರದಂತೆ ಕ್ರಮ ಕೈಗೊಳ್ಳಬೇಕು. ಹುಣ್ಣಿಮೆ ಜಾತ್ರೆಗೆ ಹೆಚ್ಚುವರಿ ಬಸ್ ಸೇವೆ ರದ್ದುಪಡಿಸಬೇಕು ಎಂದರು.
ಗ್ರಾಮದ ಸುತ್ತಮುತ್ತಲಿನ ಭಕ್ತರಿಗೆ ವಾಸ್ತವ್ಯಕ್ಕೆ ಅವಕಾಶವಿಲ್ಲ. ಬರುವ ಭಕ್ತರು ದೇವರ ದರ್ಶನ ಪಡೆದು ಮರಳ ಬೇಕು. ಜಾತ್ರೆಯ ಅಂಗವಾಗಿ ಹೊರಭಾಗದ ವಾಣಿಜ್ಯ ವ್ಯಾಪರಿಗಳಿಗೆ ಅಂಗಡಿ ಮುಗ್ಗಟ್ಟುಗಳಿಗೆ ಅವಕಾಶವಿಲ್ಲ. ಕೇವಲ ಸ್ಥಳೀಯರು ಮಾತ್ರ ಕೋವಿಡ್ ಮಾರ್ಗಸೂಚಿ ಅನ್ವಯ ಹಣ್ಣು ಕಾಯಿ ಮಾರಾಟ ಮಾಡಬೇಕು. ಹುಣ್ಣಿಮೆ ಅಂಗವಾಗಿ ದೇವಸ್ಥಾನದಲ್ಲಿ ಎಂದಿನಂತೆ ನಡೆಯುವ ಸಂಪ್ರದಾಯದ ಪೂಜೆ. ಧಾರ್ಮಿಕ ಕಾರ್ಯಗಳಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು ಎಂದರು.
ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್, ತಹಶಿಲ್ದಾರ್ ನಂದೀಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಮತಾ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಕೆಂಚನಗೌಡ, ಸಿ.ಪಿ.ಐ. ನಾಗರಾಜ್, ಪಿಎಸ್ಐ ಕಿರಣ್ ಕುಮಾರ್, ಸಿ.ಡಿ.ಪಿ.ಓ. ಮಂಜುನಾಥ್, ದೇವದಾಸಿ ಪುನರ್ವಸತಿ ಅಧಿಕಾರಿ ಪ್ರಜ್ಞಾ ಪಾಟೀಲ್, ಟಿ.ಎಚ್.ಓ. ವೆಂಕಟೇಶ್, ಪಿ.ಡಿ.ಓ. ಉಮೇಶ್ , ಮುಖಂಡರಾದ ಚಟ್ನಿಹಳ್ಳಿರಾಜಪ್ಪ, ಸೊಕ್ಕೆ ನಾಗರಾಜ, ಪಣಿಯಾಪುರ ಲಿಂಗರಾಜ, ಟಿ.ಹನುಮಂತಪ್ಪ, ಸಿದ್ದಪ್ಪ.ಕೆಂಚಪ್ಪ, ಯುವರಾಜ, ಉಮೇಶನಾಯ್ಕ ಸೇರಿದಂತೆ ಇತರರು ಇದ್ದರು.