ದಾವಣಗೆರೆ ಕೀರ್ತಿಯನ್ನು ಜಗತ್ತಿಗೇ ಪರಿಚಯಿಸಿದವರು ಹರ್ಡೇಕರ್ ಮಂಜಪ್ಪ

ಬಸವ ಬಳಗದ ವಿ. ಸಿದ್ದರಾಮಣ್ಣ ಶರಣರ ಬಣ್ಣನೆ

ದಾವಣಗೆರೆ, ಫೆ. 20- ಕರ್ನಾಟಕದ ಮೊಟ್ಟ ಮೊದಲ ಆಧುನಿಕ ವಚನ ಕಾರರಾಗಿ ನೂರಾರು ಪುಸ್ತ ಕಗಳನ್ನು ರಚಿಸಿ ದಾವ ಣಗೆರೆ ಕೀರ್ತಿಯನ್ನು ಜಗತ್ತಿಗೆ ಪರಿಚ ಯಿಸಿದವರು ಹರ್ಡೇಕರ್ ಮಂಜಪ್ಪನವರು. ಅಂದಿನ ಸಮಯದಲ್ಲಿ ಮಹಾತ್ಮಾ ಗಾಂಧೀಜಿ, ರಾಷ್ಟ್ರಕವಿ ಕುವೆಂಪು ಕೂಡಾ ಹರ್ಡೇಕರ್ ಮಂಜಪ್ಪ ಅವರನ್ನು ಮೆಚ್ಚಿದ್ದರು ಎಂದು ಬಸವ ಬಳಗದ ವಿ. ಸಿದ್ದರಾಮಣ್ಣ ಶರಣರು ತಿಳಿಸಿದರು.

ನಗರದ ಹೊಸ ಅಂಡರ್ ಬ್ರಿಡ್ಜ್ ಬಳಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಬಳಗದ ನೇತೃತ್ವದಲ್ಲಿ ನಿನ್ನೆ ನಡೆದ ಕರ್ನಾಟಕದ ಗಾಂಧಿ, ಬಸವ ಜಯಂತಿ ರೂವಾರಿ ಲಿಂ. ಶರಣ ಹರ್ಡೇಕರ್ ಮಂಜಪ್ಪನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಪುಷ್ಪ ಅರ್ಪಿಸಿ, ಅವರು ಮಾತನಾಡಿದರು.

ದಾವಣಗೆರೆಯನ್ನು ದೇವನಗರಿಯನ್ನಾಗಿ ಮಾಡಿ, ಬಸವ ಸೇವಾದಳ ರಚಿಸಿ, ಮೃತ್ಯುಂಜಯ ಅಪ್ಪಗಳ ಸಹಕಾರದೊಂದಿಗೆ ಬಸವ ಜಯಂತಿಯನ್ನು 1913ರಲ್ಲಿ ಪ್ರಪ್ರಥಮವಾಗಿ ಆಚರಿಸುವ ಮೂಲಕ ದಾವಣಗೆರೆ ಹೆಸರು ಜಗತ್ತಿಗೇ ತಿಳಿಯುವಂತೆ ಮಾಡಿ, ಕೀರ್ತಿಯನ್ನು ಬೆಳಗಿದವರು ಹರ್ಡೇಕರ್ ಮಂಜಪ್ಪನವರು. ಹಣೆ ಮೇಲಿನ ವಿಭೂತಿ ಬಸವ ಬೆಳಗು. ಹರ್ಡೇಕರ್ ಮಂಜಪ್ಪನವರು ಬಸವ ಬೆಳಗು ಬೆಳಗಿದರು ಎಂದು ಸ್ಮರಿಸಿದರು.

ಯಾರು ಜಗತ್ತಿನಲ್ಲಿ ತಂದೆ-ತಾಯಿಯರನ್ನು ದೇವರ ರೂಪದಲ್ಲಿ ಕಾಣುತ್ತಾರೋ ಅವರಂತಹ ಭಾಗ್ಯ ಶಾಲಿಗಳು ಯಾರೂ ಇಲ್ಲ. ಅವರುಗಳನ್ನು ದೇವರ ಸೇವೆ ಎಂದು ಜೋಪಾನ ಮಾಡಬೇಕು. ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಸರಿಸಮಾನವಾದ ಸ್ಥಾನ ಕೊಟ್ಟವರು, ಹೆಣ್ಣುಮಕ್ಕಳಿಗೆ ತಾಯಿ ಸ್ಥಾನ ನೀಡಿದವರು ಬಸವಣ್ಣನವರು ಎಂದರು.

ಪಾಲಿಕೆ ಮೇಯರ್ ಬಿ.ಜಿ. ಅಜಯ್‌ ಕುಮಾರ ಮಾತನಾಡಿ, ಹರ್ಡೇಕರ್ ಮಂಜಪ್ಪನವರು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದ್ದಾರೆ. ಅವರು ರಚಿಸಿದ ಕೃತಿಗಳ ಒಂದೊಂದು ಪದವನ್ನು ಓದುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ. ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರನ್ನು ಕರ್ನಾಟಕದ ಗಾಂಧಿ ಎಂದೇ ಕರೆಯಲಾಗುತ್ತಿತ್ತು. ಅವರು ನಮ್ಮ ದಾವಣಗೆರೆಯ ನಮ್ಮ ಕರ್ನಾಟಕದವರು ಎಂದು ತಿಳಿದು ನಮಗೆ ಹೆಮ್ಮೆ ಎನಿಸಿದೆ. ಅಂತಹ ವ್ಯಕ್ತಿಯ ಪ್ರೇರಣೆ, ಮಾರ್ಗದರ್ಶನದಲ್ಲಿ ನಾವು ಜೀವನ ಸಾಗಿಸೋಣ ಎಂದರು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ವಿಭೂತಿ ಬಸವಾನಂದರು, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ, ಹೆಚ್.ಸಿ. ಜಯಮ್ಮ, ಅಗಡಿ ಮಹಾಂತೇಶ, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಷಡಾಕ್ಷರಿ, ಸುಮಂಗಲಮ್ಮ, ಭುವನೇಶ್ವರಿ ತಾಯಿ, ಶಿವಣ್ಣ, ರುದ್ರೇಶ, ಶಿವಯೋಗಿ, ವೀಣಾ ಮಂಜುನಾಥ, ಅಮರಕಲಾ, ಡಾ. ಪ್ರಕಾಶ್, ಕಣಕುಪ್ಪಿ ಮುರುಗೇಶ್, ಮಂಜುನಾಥ ಸೇರಿದಂತೆ ಇತರರು ಇದ್ದರು.

error: Content is protected !!