ಹರಿಹರದ ಅಭಿನಂದನಾ ಸಮಾರಂಭದಲ್ಲಿ ಎಂ.ಎಸ್. ಪ್ರಸನ್ನಕುಮಾರ್ ಅಭಿಪ್ರಾಯ
ಹರಿಹರ, ಫೆ.20- ಸಮಾಜದ ಪ್ರಗತಿಯಲ್ಲಿ ಪ್ರಾಥಮಿಕ ಶಿಕ್ಷಣದ ಪಾತ್ರ ಬಹುಮುಖ್ಯವಾಗಿರುತ್ತದೆ. ಶಿಕ್ಷಣ ವೃತ್ತಿಯನ್ನು ಮಾಡುವಾಗ ಯಾವುದೇ ರೀತಿಯ ಫಲಾಪೇಕ್ಷೆ ಯನ್ನು ಅಪೇಕ್ಷಿಸದೆ ವೃತ್ತಿಯನ್ನು ಮಾಡಿದಾಗ ಸಮಾಜವನ್ನು ಸುಧಾ ರಣೆ ತರುವುದಕ್ಕೆ ಸಾಧ್ಯವಿರುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಎಸ್. ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಎಂ.ಎಸ್. ಪ್ರಸನ್ನಕುಮಾರ್ ಅವರ ಅಭಿನಂದನಾ ಸಮಿತಿ ಹಾಗೂ ತಾಲ್ಲೂಕು ಶಿಕ್ಷಣ ಇಲಾಖೆ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ತಳಪಾಯವಿದ್ದಂತೆ. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವಾಗ ತಮ್ಮನ್ನು ತಾವು ತೊಡಗಿಸಿಕೊಂಡು ಬೋಧನೆಯನ್ನು ಮಾಡಿದಾಗ ಮಕ್ಕಳಿಗೆ ಕಲಿಕಾಸಕ್ತಿ ಮೂಡಲು ಸಾಧ್ಯ. ಮಕ್ಕಳ ಸಾಮರ್ಥ್ಯ ಅರಿತು ಶಿಕ್ಷಕರು ಪಾಠ ಮಾಡಬೇಕು ಎಂದು ಕರೆ ನೀಡಿದರು.
ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುವ ಶಕ್ತಿ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಇರುತ್ತದೆ. ಸರ್ಕಾರಿ ಶಾಲೆಯ ಶಿಕ್ಷಕರು ದಿನಕ್ಕೆ ಒಂದು ಪುಸ್ತಕ ಬರೆಯುವಷ್ಟು ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಸರ್ಕಾರದ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಹಾಗು ಕರ್ತವ್ಯವನ್ನು ಮಾಡುವಾಗ ಅತಿಯಾದ ಒತ್ತಡ ಇದ್ದರೂ ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಹಗಲು, ರಾತ್ರಿ ಎನ್ನದೆ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಶಿಕ್ಷಕರು ಅತಿಯಾಗಿ ವಿಮರ್ಶೆ ಮಾಡುವುದರ ಬದಲಿಗೆ ಸಕಾರಾತ್ಮಕ ವಾಗಿ ಯೋಚಿಸುವಂತರಾದರೆ ಹಲವಾರು ಚಟುವಟಿಕೆಗಳನ್ನು ಮಾಡುವ ಮೂಲಕ ಶಿಕ್ಷಣ ಇಲಾಖೆ ಇನ್ನಷ್ಟು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೊರಪೇಟೆ ಮಲ್ಲೇಶಪ್ಪ ಮಾತನಾಡಿ, ದೇಶದ ಪ್ರಗತಿಗೆ ಪ್ರಾಥಮಿಕ ಶಿಕ್ಷಣದ ಕೊಡುಗೆ ಅಪಾರವಾದದ್ದು. ಅದರಲ್ಲಿ ಸ್ವಲ್ಪ ವ್ಯತ್ಯಾಸಗಳಾದರೂ ದೇಶದ ಸ್ಥಿತಿಗತಿಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತದೆ.
ಶಿಕ್ಷಕರಿಗೆ ಸ್ವಲ್ಪ ಕಾನೂನಿನ ಅಡಿಯಲ್ಲಿ ಕರ್ತವ್ಯವನ್ನು ನಿಭಾಯಿಸಲು ಹೇಳುವಾಗ ಹಿರಿಯ ಅಧಿಕಾರಿಗಳು ಬಹಳ ಜಾಗೃತಿಯ ನಡೆಯನ್ನು ಇಡಬೇಕಾಗುತ್ತದೆ. ಕಾರಣ ಅದು ಅವರು ಸಕಾರಾತ್ಮಕವಾಗಿ ತೆಗೆದುಕೊಂಡರೆ ಯಾವುದೇ ವ್ಯತ್ಯಾಸಗಳು ಆಗುವುದಿಲ್ಲ. ನಕಾರಾತ್ಮಕವಾಗಿ ತೆಗೆದುಕೊಂಡರೆ ಅದರಿಂದ ಮಕ್ಕಳ ಕಲಿಕೆಗೆ ಪೆಟ್ಟು ಬೀಳುವ ಸಂಭವ ಹೆಚ್ಚು ಇರುತ್ತದೆ ಎಂದರು.
ಶಿಕ್ಷಣ ಇಲಾಖೆಯ ಉಪನಿ ರ್ದೇಶಕ ಸಿ. ಆರ್. ಪರಮೇಶ್ವರಪ್ಪ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ಶಿಕ್ಷಕರನ್ನು ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯವಿದೆ ಎಂದು ಉದಾಹರಣೆಗಳೊಂದಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಿಇಓ ಯು. ಬಸವರಾಜಪ್ಪ ವಹಿಸಿದ್ದರು. ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ ದೊಗ್ಗಳ್ಳಿ, ಶಿಕ್ಷಕರಾದ ಅಶ್ಫಕ್ ಅಹ್ಮದ್, ಗದಿಗೆಪ್ಪ, ಬಸವರಾಜ ಸ್ವಾಮಿ, ರಾಮಪ್ಪ ಇನ್ನಿತರರು ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹೆಚ್. ಮಂಜುನಾಥ್, ಹೆಚ್.ಕೆ. ಲಿಂಗ ರಾಜ್ ದಾವಣಗೆರೆ ಜಯಕುಮಾರ್, ಅಕ್ಷರ ದಾಸೋಹ ಇಲಾಖೆ ರಾಮ ಕೃಷ್ಣಪ್ಪ, ಹೆಚ್.ಎಸ್. ಹೂಗಾರ್, ಡಿ.ಎಂ. ಮಂಜುನಾಥಯ್ಯ, ಶರಣ್ ಕುಮಾರ್ ಹೆಗಡೆ, ತಿಪ್ಪಣ್ಣರಾಜ್, ರಿಯಾಜ್ ಆಹ್ಮದ್, ಬಿ.ಬಿ. ರೇವಣ್ಣನಾಯ್ಕ್, ಲಕ್ಷ್ಮಣ, ಮಂಜಪ್ಪ ಬಿದರಿ, ಮಲ್ಲಿಕಾರ್ಜುನ ಅಂಗಡಿ, ಕೊಟ್ರೇಶ್ ಭಾನುವಳ್ಳಿ, ಸಿದ್ದಲಿಂಗಪ್ಪ, ಶಿವಮೂರ್ತಿ, ವೀರಬಸಪ್ಪ, ಪ್ರಕಾಶ್ ಭಾನುವಳ್ಳಿ, ಸಾವಿತ್ರಿ ಬಾಯಿ ಫುಲೆ ಸಂಘದ ಅಧ್ಯಕ್ಷರು, ಸದಸ್ಯರು ಇನ್ನಿತರರು ಹಾಜರಿದ್ದರು.