ಜಗಳೂರಿನಲ್ಲಿ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ
ಜಗಳೂರು, ಫೆ.20- ಜನರ ಆಶೋತ್ತರಗಳಿಗೆ ಸ್ಪಂದಿಸಿ, ಸೌಲಭ್ಯಗಳನ್ನು ತಲುಪಿಸಲು ಸರ್ಕಾರವೇ ತಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯ ಕ್ರಮದ ಅಂಗವಾಗಿ ಗ್ರಾಮದಲ್ಲಿ ಪ್ರದಕ್ಷಿಣೆ ನಡೆಸಿ, ಅಹವಾಲು ಸ್ವೀಕರಿಸಿ ನಂತರ ಅವರು ಮಾತನಾಡಿದರು.
ಕಂದಾಯ ಸಚಿವರ ಆಶಯದ ಆದೇಶದಂತೆ ವಿಶಿಷ್ಟ ಕಾರ್ಯಕ್ರಮವನ್ನು ರಾಜ್ಯದಲ್ಲಿ ರೂಪಿಸಲಾಗಿದ್ದು, ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳು ವುದು ಮುಖ್ಯ ಉದ್ದೇಶವಾಗಿದೆ ಎಂದರು.
ಗ್ರಾಮದಲ್ಲಿ ವಾಸ್ತವ್ಯ ಹೂಡುವುದು ಅಷ್ಟೇ ಅಲ್ಲ, ಪ್ರತಿ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಆಲಿಸುವುದು. ಸ್ಥಳದಲ್ಲಿಯೇ ಸಾಧ್ಯವಾದ ಮಟ್ಟಿಗೆ ಪರಿಹಾರ ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು. ಶಾಸಕರ ಹಾಗೂ ಜನಪ್ರತಿನಿಧಿಗಳ ಸಹಕಾರ ಹಾಗೂ ಅಧಿಕಾರಿಗಳಿಗೆ ನೀಡಿದ ಸ್ವಾತಂತ್ರ್ಯ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿದೆ. ಅಲ್ಲದೇ ಸ್ಥಳೀಯ ಶಾಸಕರು ಪ್ರತಿ ಹೆಜ್ಜೆಗೂ ಅಧಿಕಾರಿಗಳ ಕೈಹಿಡಿದು ಕೆಲಸ ಮಾಡಿಸುತ್ತಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇಂದು ಗ್ರಾಮ ಮಟ್ಟದ ಅಧಿಕಾರಿಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೂ ಪ್ರತಿಯೊ ಬ್ಬರೂ ತಮ್ಮ ಕೆಲಸಕ್ಕಾಗಿ ಸಮಯ ವ್ಯಯ ಮಾಡಿ ತಾವು ಅಲೆದಾಡುವುದನ್ನು ತಪ್ಪಿಸಲು ನಿಮ್ಮ ಗ್ರಾಮಕ್ಕೆ, ವಿವಿಧ ಕಲ್ಯಾಣ ಇಲಾಖೆಗಳ, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ತಂಡ ಮನೆ ಬಾಗಿಲಿಗೆ ಆಗಮಿಸಿದ್ದು, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ, ಪರಿಹಾರ ಪಡೆದುಕೊಳ್ಳಬೇಕು ಎಂದರು.
ಗ್ರಾಮಸ್ಥರು ಯಾವುದೇ ಭಯ, ಆತಂಕವಿಲ್ಲದೇ ಗ್ರಾಮಕ್ಕೆ ಸಂಬಂಧಿಸಿದ ಮತ್ತು ವೈಯಕ್ತಿಕ ಅಹವಾಲು, ಕುಂದು-ಕೊರತೆಗಳ ದೂರುಗಳನ್ನು ಮೌಖಿಕ ಹಾಗೂ ಲಿಖಿತ ರೂಪದಲ್ಲಿ ನೀಡಬಹುದಾಗಿದೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರಯತ್ನ ಮಾಡುತ್ತಾರೆ. ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಅಸಗೋಡು ಗ್ರಾಮದಿಂದ ಕೊಟ್ಟೂರು- ಹರಪನಹಳ್ಳಿ ಮಾರ್ಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ತಮ್ಮ ಬೇಡಿಕೆ ಈಡೇರಿಸ ಲಾಗುವುದು. ಅಲ್ಲದೇ ಬಸವನಕೋಟೆ ಗ್ರಾಮ ಆಯ್ಕೆ ಮಾಡಿರುವ ಉದ್ದೇಶ ತಾಲ್ಲೂಕಿಗೂ ನಮಗಿರುವ ಭಾವನಾತ್ಮಕ ಸಂಬಂಧವಾಗಿದೆ. ನನ್ನ ಜಿಲ್ಲೆಯ ರಾಮದುರ್ಗ ತಾಲ್ಲೂಕು ಇದೇ ರೀತಿ ಬರದ ನಾಡಾಗಿದೆ. ತಾಲ್ಲೂಕಿನ ಅಭಿವೃದ್ಧಿ ನಮ್ಮ ಗುರಿಯಾಗಿದೆ ಎಂದರು.
ಬರಮುಕ್ತ ಕ್ಷೇತ್ರವಾಗಲಿದೆ : ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ 17 ಕೆರೆ ತುಂಬಿಸಲಾಗುವುದು. ನಂತರ ಎರಡನೇ ಹಂತದಲ್ಲಿ ಕೆರೆಗಳು ಭರ್ತಿ ಯಾಗಲಿವೆ. ಇದರಿಂದಾಗಿ ಶೀಘ್ರದಲ್ಲೇ ಬರ ಮುಕ್ತವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದು, ಕೊರೊನಾ ಸಂಕಷ್ಟದ ದಿನಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದೆ. ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು.
ಕ್ಷೇತ್ರದಲ್ಲಿ ಉತ್ತಮ ಮಳೆ ಬೆಳೆಯಾಗುತ್ತಿದೆ. ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಉತ್ತಮ ಕಾರ್ಯವೈಖರಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸದಾ ನಮ್ಮ ಸಹಕಾರವಿರುತ್ತದೆ ಎಂದು ಪ್ರಶಂಸಿಸಿದರು.
ತಹಶೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಗ್ರಾಮದಲ್ಲಿ 22 ಪಹಣಿ ತಿದ್ದುಪಡಿ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಯೋಜನೆಯಡಿ 61 ಅರ್ಜಿಗಳು ಸ್ವೀಕೃತವಾಗಿದ್ದು, ಮಂಜೂರಾತಿಗೆ ಕ್ರಮ ವಹಿಸಲಾಗುವುದು. 50 ಶೌಚಾಲಯಗಳನ್ನು ನಿರ್ಮಿಸಲು ಆದೇಶಿಸಲಾಗಿದೆ ಹಾಗೂ 76 ರೈತರಿಗೆ ಬೆಳೆ ಹಾನಿಯಾಗಿದ್ದು, ಪರಿಹಾರವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ನಮೂನೆ 53 ಹಾಗೂ ನಮೂನೆ 57ರಲ್ಲಿ ಸೇರಿ 89 ಅರ್ಜಿಗಳು ಸ್ವೀಕೃತಿಯಾಗಿದ್ದು, ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಮುಂದಿನ ಸಭೆಯಲ್ಲಿ ವಿಲೇವಾರಿ ಮಾಡಲಾಗುವುದು ಹಾಗೂ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸರ್ವೇ ನಂ.23 ರಲ್ಲಿ 2 ಎಕರೆ ಜಮೀನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಒ ವಿಜಯ್ ಮಹಾಂತೇಶ್, ಜಿ.ಪಂ ಸದಸ್ಯ ಎಸ್.ಕೆ ಮಂಜುನಾಥ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಾ.ಪಂ ಇಒ ಮಲ್ಲನಾಯ್ಕ, ಗ್ರಾ.ಪಂ ಅಧ್ಯಕ್ಷರಾದ ರೇಖಾ ಸೇರಿದಂತೆ ತಾಲ್ಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
– ಬಿ.ಪಿ.ಸುಭಾನ್,
[email protected]