ಜಗಳೂರು, ಫೆ.6 – ರೈತವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ತಾಲ್ಲೂಕಿನ ದೊಣ್ಣೆಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ (ಹುಚ್ವವ್ವನಹಳ್ಳಿ ಮಂಜುನಾಥ್) ದ ಪದಾಧಿಕಾರಿಗಳು ರಾಜ್ಯ ಹೆದ್ದಾರಿ 50 ಹಾಗೂ ಸೊಕ್ಕೆ ಹೋಬಳಿ ಚಿಕ್ಕಬಂಟನಹಳ್ಳಿ ಬಳಿ ಚಳ್ಳಕೆರೆ ಅರಭಾವಿ ರಾಜ್ಯ ಹೆದ್ದಾರಿ ಬಳಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ರೈತ ವಿರೋಧಿ ಮೂರು ವಿದ್ಯುತಚ್ಚಕ್ತಿ, ಗುತ್ತಿಗೆ ಬೇಸಾಯ, ಹಾಗೂ ಎಪಿಎಂಸಿ ಕಾಯ್ದೆಗಳನ್ನು ಕೂಡಲೆ ಹಿಂಪಡೆಯ ಬೇಕು ಎಂದು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವವರ ಪರವಾನಿಗೆ ರದ್ದುಪಡಿಸಬೇಕು ಅಲ್ಲದೆ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಜಾರಿಗೆ ಖಾಸಗೀಕರಣದ ಹುನ್ನಾರ ಕೈಬಿಡಬೇಕು. ರೈತರ ಪರವಾಗಿ ಎಂದು ಹೇಳುವ ಸರ್ಕಾರಗಳು ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಿರಂಜೀವಿ, ಪದಾಧಿಕಾರಿಗಳಾದ ಗೌಡಗೊಂಡನಹಳ್ಳಿ ಸತೀಶ್, ಶರಣಪ್ಪ, ಕೆಂಚಪ್ಪ, ರಾಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಿಪಿಐ ಡಿ.ದುರುಗಪ್ಪ ಹಾಗೂ ಪಿಎಸ್ ಐ ಸಂತೋಷ್ ಭಾಗೋಜಿ ಪ್ರತಿಭಟನೆಗೆ ರಕ್ಷಣೆ ಒದಗಿಸಿದರು.