ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ದಾವಣಗೆರೆ ಮೇಯರ್ ಬಿ.ಜಿ.ಅಜಯ್‌ಕುಮಾರ್ ಅಭಿಮತ
ಬೆಂಗಳೂರು, ಫೆ.6- ಬೆಂಗಳೂರಿನ ಸಿ.ಎಂ ಗೃಹ ಕಛೇರಿ ಕೃಷಾದಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಎರಡನೇ ತಿದ್ದುಪಡಿ ಅಧಿನಿಯಮ 2015ರ ಅನ್ವಯ ವಿಕೇಂದ್ರೀಕೃತ ಆಡಳಿತ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿರುವ ಹಾಗೂ ಆಯವ್ಯಯ ಅವಕಾಶವನ್ನು ಕಲ್ಪಿಸುವ ಕುರಿತು ಪುನರಾವಲೋಕನೆ ಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಗಿದೆ.
ಸಂವಿಧಾನದ 74ನೇ ತಿದ್ದುಪಡಿ ಆಶಯಗಳಿಗೆ ಅನುಗುಣವಾಗಿ ನಗರ ಸ್ಥಳೀಯ ಸಂಸ್ಥೆಗಳು ತಳಮಟ್ಟ ದಿಂದ ಯೋಜನೆಗಳನ್ನು ರೂಪಿಸಲು ವಾರ್ಡ್ ಮಟ್ಟದಲ್ಲಿ ಸಭೆ ಸೇರಿ ದೂರದೃಷ್ಟಿ ಹಾಗೂ ವಾರ್ಷಿಕ ಯೋಜನೆಗಳನ್ನು ಕಡ್ಡಾಯವಾಗಿ ತಯಾರಿಸಿ ಅನುಷಾನ ಗೊಳಿಸಲು ಆದೇಶ ಕೋರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಪ್ರಶ್ನೆಗೆ ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರ ಬಿ.ಜಿ.ಅಜಯ್ ಕುಮಾರ್ ಅವರು ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಳಮಟ್ಟದಿಂದ ನಗರದ ಅಭಿವೃದ್ಧಿಗೆ ಸಮಿತಿಗಳನ್ನು ರಚಿಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವುದು ಒಳ್ಳೆಯ ವಿಷಯ, ಆದರೆ ಸಾರ್ವಜನಿಕರು ಈ ವಿಷಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಉದಾಹರಣೆಗೆ ನಮ್ಮಲ್ಲಿ ಮಾಹಿತಿ ಪಡೆಯಲು ಆರ್.ಟಿ.ಐ (ರೈಟ್ ಇನ್ಫಾರ್ಮೇಷನ್ ಆಕ್ಟ್) ಇದೆ, ಆದರೆ ಇದರ ಸದುಪಯೋಗವನ್ನು ಎಷ್ಟು ಜನರು ಪಡೆಯುತ್ತಿದ್ದಾರೆ ಎಂದು ನಾವೆಲ್ಲರೂ ಯೋಚಿಸಲೇಬೇಕು ಮತ್ತು ಸಂವಿಧಾನದ 74ನೇ ತಿದ್ದುಪಡಿಯನ್ನು ಮೇಲ್ಮಟ್ಟದಲ್ಲಿ ಬರೆದು, ಚರ್ಚಿಸಿ ಇದನ್ನು ರದ್ದು ಮಾಡಿದರೆ ಒಳ್ಳೆಯದು ಎಂದು ಪ್ರತಿಕ್ರಿಯಿಸಿದರು.
ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ಅವರನ್ನು ತಾಲ್ಲೂಕು ನಗರ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿಸಲು ಅವಕಾಶ ಕಲ್ಪಿಸಲು ಆದೇಶ ಕೋರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಇದಕ್ಕೆ ಉತ್ತರಿಸಿದ ಮಹಾಪೌರರು ತಹಶೀಲ್ದಾರ್ ಅವರನ್ನು ನಮ್ಮ ರೈತರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ ಕಾನೂನುನಾತ್ಮಕವಾಗಿ ಸೂಚನೆಗಳನ್ನು ನೀಡಿದೆ.
ಆದರೆ ನಾವುಗಳು ನಗರ ಯೋಜನೆಗೆ ಮತ್ತು ಸಮಗ್ರ ಅಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿ ಮಾಡುವುದರಿಂದ ಅವರು ಕಚೇರಿಗೆ ಸಮಯ ನೀಡಲು ಆಗುವುದಿಲ್ಲ. ಅದಾಗಿ ಈಗಾಗಲೇ ಕೆಲಸದ ಒತ್ತಡದಿಂದಾಗಿ ರೈತರಿಗೆ ಸಮಯ ನೀಡಲು ಆಗುತ್ತಿಲ್ಲ, ತಹಶೀಲ್ದಾರ್ ನ್ಯಾಯಾಲಯ ಕೂಡ ಇದ್ದು ಸಮಯದ ಕೊರತೆ ಇದೆ. ಆದ್ದರಿಂದ ನಗರ ಯೋಜನೆಗೆ ಮತ್ತು ಸಮಗ್ರ ಅಭಿವೃದ್ಧಿಗೆ ಸದಸ್ಯರನ್ನಾಗಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಅಭಿಪ್ರಾಯ ತಿಳಿಸಿದರು.
ಈ ವಿಷಯಗಳ ಬಗ್ಗೆ ದಾವಣಗೆರೆ ಮಹಾಪೌರ ಬಿ.ಜಿ.ಅಜಯ್ ಕುಮಾರ್ ಅವರು ನೀಡಿದ ಮಾಹಿತಿ ಒಳ್ಳೆಯದು ಎಂದು ನಗರಾಭಿವೃದ್ಧಿ ಆಪ್ತ ಕಾರ್ಯದರ್ಶಿಗಳು ಹೇಳಿದರು.
ಈ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್, ವಿಕೇಂದ್ರೀಕರಣ ಸಮಿತಿ ಅಧ್ಯಕ್ಷ ಪ್ರಮೋದ್ ಹೆಗಡೆ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.